ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಿ: ದ.ಕ. ಜಿಲ್ಲಾಧಿಕಾರಿ ಮನವಿ

Update: 2020-04-16 05:14 GMT

ಮಂಗಳೂರು, ಎ.16: ಲಾಕ್‌ಡೌನ್‌ಗೆ ದ.ಕ. ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಲಾಕ್‌ಡೌನ್ ಮೇ 3ರವರೆಗೆ ಮುಂದುವರಿಯಲಿದ್ದು, ಈ ಅವಧಿಯಲ್ಲೂ ಸಹಕರಿಸಿ. ಅನಾವಶ್ಯವಾಗಿ ಮನೆಯಿದ ಹೊರಬರಬೇಡಿ, ಬಂದರೂ ಮಾಸ್ಕ್ ಧರಿಸುವಂತೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ 12 ಕೋವೀಡ್-19 ಪಾಸಿಟಿವ್ ಪ್ರಕರಣಗಳಲ್ಲಿ ಈ ವರೆಗೆ 9 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಗುಣಮುಖರಾದವರಿಗೆ ಮತ್ತೆ 14 ದಿನ ಹೋಂ ಕಾರಂಟೈನ್‌ಗೆ ವೈದ್ಯರು ಸೂಚಿಸಿದ್ದಾರೆ. ಅದೇರೀತಿ 12 ಪಾಸಿಟಿವ್ ಬಂದಿರುವ 12 ಮಂದಿ ಮತ್ತು ಅವರ ಸಂಪರ್ಕದ ಬಂದಿರುವ ಎಲ್ಲರನ್ನೂ ಗುರುತಿಸಿ ಅಗತ್ಯಬಿದ್ದವರ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್-19 ಸರ್ವೇ ಕಾರ್ಯದ ಮುಂದಿನ ಭಾಗವಾಗಿ ಇಡೀ ಜಿಲ್ಲೆಯಲ್ಲಿ influenza like illness(ILI) ಅಥವಾ evere acute repository infection(SARI) ಈ ಎರಡು ಸೋಂಕುಗಳಿಂದ ಬಳಲುತ್ತಿರುವವರ ಮಾಹಿತಿ ಕಲೆ ಹಾಕಬೇಕಾಗಿದೆ. ಇದು ತುಂಬಾ ಮಹತ್ವದ್ದಾಗಿದ್ದು, ಈ ಸರ್ವೇಗಾಗಿ ಪ್ರತಿಯೊಂದು ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲುಗಳು ಆಗಮಿಸುತ್ತಾರೆ. ಈ ಸಂದರ್ಭ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಮಾತ್ರ ಅವರು ಕೇಳುತ್ತಾರೆ. ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ. ಕೋವಿಡ್-19 ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲುನೋವು ಉಸಿರಾಟದ ಸಮಸ್ಯೆಯ ಬಗ್ಗೆ ಕೆಲವು ಸರಳ ಪ್ರಶ್ನೆಗಳನ್ನು ಮಾತ್ರ ಕೇಳುವರು. ಜೊತೆಗೆ ಹೃದ್ರೋಗ ಸಮಸ್ಯೆ, ಮಧುಮೇಹ, ಬಿ.ಪಿ., ಕಿಡ್ನಿ ಸಮಸ್ಯೆ, ಕ್ಯಾನ್ಸರ್, 60 ವರ್ಷ ಮೇಲ್ಪಟ್ಟವರೇ ಎಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಈ ರೀತಿ ಮಾಹಿತಿ ಕಲೆ ಹಾಕುವುದರಿಂದ ಯಾವುದಾದಲೂ ಒಂದು ಜಾಗದಲ್ಲಿ ಹೆಚ್ಚು ಇಂತಹ ಪ್ರಕರಣಗಳಿರುವುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಆವಶ್ಯಕತೆಯಿದ್ದಲ್ಲಿ ಅಲ್ಲಿಗೆ ತೆರಳಿ ಪರೀಕ್ಷೆಗಳನ್ನು ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಯಾವುದೇ ಗಾಬರಿಗೆ ಒಳಗಾಗದೆ ಜನತೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಈ ನಡುವೆ ಇನ್ನೇನು ಮಳೆಗಾಲ ಕೂಡಾ ಆರಂಭವಾಗಲಿದೆ. ಆದ್ದರಿಂದ ಮಲೇರಿಯಾ ಮತ್ತು ಡೆಂಗ್ ಬಗ್ಗೆಯೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತರು ಸರ್ವೇ ಸಂದರ್ಭ ಮನೆ ಪರಿಸರದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ತಾಣಗಳ ಬಗ್ಗೆಯೂ ಗಮನ ಹರಿಸಲಿದ್ದಾರೆ. ಈ ಎಲ್ಲ ವಿಚಾರಗಳಲ್ಲೂ ಸರ್ವೇ ನಡೆಸುವ ಆಶಾ ಕಾರ್ಯಕರ್ತರಿಗೆ ಅಥವಾ ಎಂಪಿಡಬ್ಲು ಅವರಿಗೆ ಎಲ್ಲ ರೀತಿಯಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿ ವೀಡಿಯೊ ಸಂದೇಶದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News