ಲಾಕ್‌ಡೌನ್ ಉಲ್ಲಂಘಿಸುವ ವಿಐಪಿಗಳ ಹೆಸರು ಬಹಿರಂಗ: ಚಂಡೀಗಢ ಆಡಳಿತ ನಿರ್ಧಾರ
ಹೊಸದಿಲ್ಲಿ, ಎ.17: ಲಾಕ್‌ಡೌನ್ ಉಲ್ಲಂಘಿಸುವ ಅತಿಗಣ್ಯ ವ್ಯಕ್ತಿಗಳ (ವಿಐಪಿ) ಹೆಸರುಗಳನ್ನು ಬಹಿರಂಗವಾಗಿ ಪ್ರಕಟಿಸಲು ಚಂಡೀಗಢ ಜಿಲ್ಲಾಡಳಿತ ನಿರ್ಧರಿಸಿದೆ. ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಕೊರೋನಾದ ಹಾಟ್‌ಸ್ಪಾಟ್ ಎಂಬುದಾಗಿ ಕೇಂದ್ರ ಸರಕಾರವು ಗುರುತಿಸಿದ್ದು, ಅಲ್ಲಿ ಈವರೆಗೆ 21 ಸೋಂಕು ಪ್ರಕರಣಗಳು ವರದಿಯಾಗಿವೆ.
‘‘ನಾಳೆಯಿಂದ ನಾವು ಬೆಳಗ್ಗೆ ಹಾಗೂ ಸಂಜೆಯ ಕಾಲ್ನಡಿಗೆಗೆ ತೆರಳಲು ಕರ್ಫ್ಯೂ ಆದೇಶಗಳನ್ನು ಉಲ್ಲಂಘಿಸುವ ವಿಐಪಿಗಳ ಹೆಸರು ಹಾಗೂ ಹುದ್ದೆಯನ್ನು ಪ್ರಕಟಿಸಲಿದ್ದೇವೆ’’ ಎಂದು ಚಂಡೀಗಢ ಕೇಂದ್ರಾಡಳಿತದ ಸಲಹೆಗಾರ ಮನೋಜ್ ಪರಿಂದಾ ಬುಧವಾರ ಟ್ವೀಟ್ ಮಾಡಿದ್ದಾರೆ.
ಕೊರೋನ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಅದರಲ್ಲೂ ಉನ್ನತ ಸ್ಥಾನಮಾನಗಳಲ್ಲಿರುವರು ಹೆಚ್ಚಿನ ಹೊಣೆಗಾರಿಕೆಯೊಂದಿಗೆ ವರ್ತಿಸಬೇಕೆಂದು ಆಡಳಿತವು ನಿರೀಕ್ಷಿಸುವುದಾಗಿ ಪರಿದಾ ಹೇಳಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷದ ಶಾಸಕ ಕನ್ವರ್‌ಸಂಧು,ಈ ಕ್ರಮವನ್ನು ವಿರೋಧಿಸಿದ್ದಾರೆ.ನಾಗರಿಕ ಸಮಾಜದಲ್ಲಿ ವ್ಯಕ್ತಿಯನ್ನು ಹೆಸರಿಸಿ, ಅಪಮಾನಿಸಲು ಸಾಧ್ಯವಿಲ್ಲ. ಇದರ ಬದಲಿಗೆ ಕಾನೂನು ಜಾರಿಗೆ ತಂದು, ಕರ್ಫ್ಯೂ ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಹಾಗೂ ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.