ತೊಕ್ಕೊಟ್ಟು: ನೇತ್ರಾವತಿ ಸೇತುವೆಯಿಂದ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ

Update: 2020-04-17 03:55 GMT

ಉಳ್ಳಾಲ, ಎ.16: ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಸಮೀಪದ 'ಉಳ್ಳಾಲ ನೇತ್ರಾವತಿ ಸೇತುವೆ'ಯಿಂದ ಬುಧವಾರ ರಾತ್ರಿ ನಿಗೂಢವಾಗಿ ನಾಪತ್ತೆಯಾದ ಕೊಣಾಜೆ ಪುಳಿಂಚಾಡಿ ನಿವಾಸಿಯ ಮೃತದೇಹ ಶುಕ್ರವಾರ ಬೆಳಗ್ಗೆ ಉಳ್ಳಾಲದ ನದಿ ತೀರದಲ್ಲಿ ಪತ್ತೆಯಾಗಿದೆ. ಇದೊಂದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.
ಮೂಲತಃ ಸೋಮೇಶ್ವರ ಸಮೀಪದ ಕೊಲ್ಯದ ಪ್ರಸಕ್ತ ಕೊಣಾಜೆ ಪುಳಿಂಚಾಡಿ ನಿವಾಸಿ ವಿಕ್ರಮ್ ಗಟ್ಟಿ(35)ಬುಧವಾರ ರಾತ್ರಿ ನೇತ್ರಾವತಿ ಸೇತುವೆಯಿಂದ ನಾಪತ್ತೆಯಾಗಿದ್ದು, ಅವರ ಮೃತದೇಹ ಇಂದು ಬೆಳಗ್ಗೆ ಉಳ್ಳಾಲ ಹೊಯ್ಗೆಯ ನದಿ ತೀರದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಕ್ರಮ್ ಅವರ ಕಾರು ಬುಧವಾರ ರಾತ್ರಿ ಸುಮಾರು 10:30ಕ್ಕೆ ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿತ್ತು. ಕಾರಿನ ಹೆಡ್‌ಲೈಟ್ ಉರಿಯುತ್ತಿದ್ದು, ಬಾಗಿಲು ತೆರೆದ ಸ್ಥಿತಿಯಲ್ಲಿತ್ತೆನ್ನಲಾಗಿದೆ. ಆದರೆ ಕಾರಿನ ಮಾಲಕ ವಿಕ್ರಂ ಗಟ್ಟಿ ನಾಪತ್ತೆಯಾಗಿದ್ದು ಅವರಿಗಾಗಿ ಗುರುವಾರವಿಡೀ ಶೋಧ ನಡೆಸಲಾಗಿತ್ತು. ಕೊಣಾಜೆ ಸಮೀಪದ ಪುಳಿಂಚಾಡಿ ಬಳಿ ಹೊಸಮನೆಯಲ್ಲಿ ವಾಸವಾಗಿದ್ದವಿಕ್ರಂ ಗಟ್ಟಿ ಕೊಲ್ಯದಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ಎ.15ರಂದು ರಾತ್ರಿ ಪುಳಿಂಚಾಡಿಯ ಮನೆಯಲ್ಲಿ ವಿಕ್ರಮ್‌ರ ಪತ್ನಿಯ ತಂದೆ, ತಾಯಿ ಹಾಗೂ ಪತ್ನಿ, ಮಗು ಇದ್ದರು ಎನ್ನಲಾಗಿದೆ. 9 ಗಂಟೆಗೆ ಟಿವಿ ವೀಕ್ಷಿಸುತ್ತಿದ್ದಾಗ ದಿಢೀರನೆ ಕಾರಿನ ಬ್ಯಾಟರಿ ರೀಚಾರ್ಜ್ ಮಾಡುವ ಉದ್ದೇಶಕ್ಕಾಗಿ ಕೊಣಾಜೆ ಪದವು ತನಕ ಹೋಗಿ ಬರುತ್ತೇನೆಂದು ಹೇಳಿ ವಿಕ್ರಮ್ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಬಳಿಕ ಮನೆ ಮಂದಿ ಕರೆ ಮಾಡಿದಾಗ ಅವರ ಮೊಬೈಲ್ ಪೋನ್ ಸ್ವಿಚ್ ಆಫ್ ಬರುತ್ತಿತ್ತು ಎಂದು ಕೊಣಾಜೆ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News