×
Ad

ಒಂದೇ ದಿನ ನಾಲ್ಕು ಕಡೆ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ

Update: 2020-04-17 09:43 IST

ಪಾಟ್ನಾ, ಎ.17: ಬಿಹಾರದಲ್ಲಿ ಆರೋಗ್ಯಾಧಿಕಾರಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದಲ್ಲಿ ಒಂದೇ ದಿನ ನಾಲ್ಕು ಕಡೆ, ಕೋವಿಡ್-19 ಸಮೀಕ್ಷೆಗೆ ತೆರಳಿದ್ದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹುಟ್ಟೂರು ಬಿಹಾರ್ ಶರೀಫ್‌ನಲ್ಲೇ ಎರಡು ಪ್ರಕರಣಗಳು ನಡೆದಿವೆ. ಜನ ತಾಳ್ಮೆ ಕಳೆದುಕೊಳ್ಳದಂತೆ ಸರ್ಕಾರ ಮನವಿ ಮಾಡಿದೆ.

ಸಿವಾನ್, ಬೆಗುಸರಾಯ್, ನಲಂದಾ ಮತ್ತು ನವಾಡ ಜಿಲ್ಲೆಯಲ್ಲಿ ಮನೆ ಮನೆ ಕೊರೋನ ಪರೀಕ್ಷೆ ನಡೆಸುವ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರ ಚಾಲನೆ ನೀಡಿದ ಬೆನ್ನಲ್ಲೇ, ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿಗಳು ನಡೆಯುತ್ತಿವೆ. ರಾಜ್ಯದ ಒಟ್ಟು 53 ಸಕ್ರಿಯ ಕೊರೋನ ಸೋಂಕು ಪ್ರಕರಣಗಳ ಪೈಕಿ ಈ ನಾಲ್ಕು ಜಿಲ್ಲೆಗಳಲ್ಲಿ ಶೇಕಡ 60ರಷ್ಟು ಪ್ರಕರಣಗಳು ಈ ಜಿಲ್ಲೆಗಳಲ್ಲಿವೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 83 ಪ್ರಕರಣಗಳು ವರದಿಯಾಗಿದ್ದು, 37 ಮಂದಿ ಚೇತರಿಸಿಕೊಂಡಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.
ಸಿವಾನ್ ಹಾಗೂ ಬೆಗುಸರಾಯ್ ಜಿಲ್ಲೆಗಳನ್ನು ಆರೋಗ್ಯ ಸಚಿವಾಲಯ ಹಾಟ್‌ಸ್ಪಾಟ್‌ಗಳೆಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಮನೆಮನೆ ಸಮೀಕ್ಷೆ ಅರಂಭಿಸಲಾಗಿದೆ.

ಬುಧವಾರ ಔರಂಗಾಬಾದ್ ಮತ್ತು ಮೋತಿಹರಿ ಜಿಲ್ಲೆಗಳಲ್ಲೂ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. ಮನೆಗಳಿಗೆ ಸಮೀಕ್ಷೆಗೆ ತೆರಳಿದ್ದ ಆರೋಗ್ಯ ಕಾರ್ಯಕರ್ತರನ್ನು ಗ್ರಾಮಸ್ಥರು ಅಟ್ಟಾಡಿಸಿಕೊಂಡು ಹೊಡೆದಿದ್ದರು. ಹಲವು ಮಂದಿ ಸ್ಥಳೀಯರು ದಿಲ್ಲಿಯಿಂದ ವಾಪಸ್ಸಾದ ಹಿನ್ನೆಲೆಯಲ್ಲಿ ಇಲ್ಲಿ ಸಾಂಕ್ರಾಮಿಕ ಹರಡುವ ಸಾಧ್ಯತೆ ಇದೆ.

ಈ ಮಧ್ಯೆ ಜನ ತಾಳ್ಮೆಯಿಂದ ಇರುವಂತೆ ಆರೋಗ್ಯ ಸಚಿವಾಲಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಮನವಿ ಮಾಡಿದ್ದಾರೆ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಗುಪ್ತೇಶ್ವರ ಪಾಂಡೆ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News