ದುಡಿಮೆಯಿಲ್ಲದೆ ಸಂಕಷ್ಟಕ್ಕೀಡಾದ ಆಟೊ ಚಾಲಕರು
ಬೆಂಗಳೂರು, ಎ.16: ಕೊರೋನ ನಿಯಂತ್ರಿಸುವ ಉದ್ದೇಶದಿಂದ ದೇಶ ದಾದ್ಯಂತ ಲಾಕ್‌ಡೌನ್ ಘೋಷಿಸಿರುವ ಪರಿಣಾಮದಿಂದಾಗಿ ರಾಜಧಾನಿಯಲ್ಲಿ ಆಟೊಗಳು ರಸ್ತೆಗಳಿಯದ ಹಿನ್ನೆಲೆಯಲ್ಲಿ ಚಾಲಕರು ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಿತ್ಯ ಜೀವನಕ್ಕೆ ಆಟೊವನ್ನೇ ಅವಲಂ ಬಿಸಿದ್ದ ಬಹುತೇಕ ಆಟೊಚಾಲಕರು ಹಾಗೂ ಅವರ ಕುಟುಂಬದವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಹೀಗಾಗಿ, ಇಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಬೀದಿಯಲ್ಲಿ ಯಾರೂ ಓಡಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅದರ ಪರಿಣಾಮ ಆಟೊ ಚಾಲಕರ ಮೇಲೆಯೂ ಬೀರಿದೆ.
ಆಟೊ ಓಡದೇ ಇರುವುದರಿಂದ ನಮ್ಮ ಗಳಿಕೆ ಶೂನ್ಯವಾಗಿದೆ. ಕೈಯಲ್ಲಿ ದುಡ್ಡಿಲ್ಲ. ಮನೆಯಲ್ಲಿದ್ದ ದಿನಸಿ, ತರಕಾರಿ ಎಲ್ಲವೂ ಖಾಲಿಯಾಗಿದೆ. ಈ ಹಿಂದೆ ಉಳಿಸಿಕೊಂಡಿದ್ದ ಅಲ್ಪಸ್ವಲ್ಪ ದಿನಸಿಯೂ ಖಾಲಿಯಾಗಿದೆ. ಈಗ ನಮ್ಮ ಬಳಿ ಹಾಲು, ಮೊಸರು, ಹಣ್ಣು, ತರಕಾರಿ, ದಿನಸಿಗಳನ್ನು ಖರೀದಿ ಮಾಡಲು ಸಹ ದುಡ್ಡಿಲ್ಲ. ಮನೆಯಲ್ಲಿ ಹೆಂಡತಿ, ಮಕ್ಕಳ ಕಷ್ಟ ನೋಡೋಕಾಗುತ್ತಿಲ್ಲ. ಯಾರೂ ಸಾಲವನ್ನೂ ನೀಡುತ್ತಿಲ್ಲ. ಬದುಕು ನಡೆಸುವುದು ಕಷ್ಟವಾಗುತ್ತಿದೆ ಎಂದು ಆಟೊ ಚಾಲಕ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ನಮಗೆ ಮೂರು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗುವಿದ್ದಾನೆ. ಮೂರು ಜನರು ಶಾಲೆಗೆ ಹೋಗುತ್ತಿದ್ದರು. ನಾನು ಆಟೊ ಓಡಿಸಿಕೊಂಡು ಮನೆಯನ್ನು ನೋಡಿಕೊಳ್ಳುತ್ತಿದ್ದೆ. ಹೆಂಡತಿಯು ಅನಾರೋಗ್ಯದಿಂದ ನರಳುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಆದರೆ, ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾದರೂ, ನಮ್ಮ ಬದುಕಿನ ಮೇಲೆ ವಿಪರೀತ ಪರಿಣಾಮ ಬೀರಿದೆ ಎಂದು ಮತ್ತೊಬ್ಬ ಆಟೊ ಚಾಲಕ ನವಾಜ್ ಹೇಳಿದ್ದಾರೆ.
ನನಗೆ ಅನೇಕ ಆಟೊ ಚಾಲಕರು ಕರೆ ಮಾಡಿ, ವಾಟ್ಸ್‌ಆಪ್ ಮೂಲಕ ಸಂದೇಶ ಕಳುಹಿಸಿ ಸಾರ್ ನಮಗೆ ತುಂಬಾ ಕಷ್ಟವಾಗುತ್ತಿದೆ. ಏನಾದರೂ ಸಹಾಯ ಮಾಡಿ ಎನ್ನುತ್ತಿದ್ದಾರೆ. ಆದರೆ, ನಾವೇ ಅಸಹಾಯಕರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಏನು ಮಾಡೋದು ತಿಳಿಯುತ್ತಿಲ್ಲ.
-ಸಿ.ಎನ್.ಶ್ರೀನಿವಾಸ್, ಎಆರ್‌ಡಿಯು ಪ್ರಧಾನ ಕಾರ್ಯದರ್ಶಿ
ಸರಕಾರಕ್ಕೆ ಚಾಲಕರ ಬೇಡಿಕೆಗಳು
► ಪ್ರತಿಯೊಬ್ಬ ಆಟೊ ಚಾಲಕರಿಗೂ ಸರಕಾರದಿಂದ 50 ರೂ. ಸಾವಿರ ಸಾಲ ನೀಡಬೇಕು.
► ಎ.20 ಬಳಿಕ ಆಟೊ ಓಡಿಸಲು ಅವಕಾಶ ನೀಡಬೇಕು ಅಥವಾ ಸರಕಾರದಿಂದ ಬದುಕಲು ನೆರವು ನೀಡಬೇಕು.
► ವಿದ್ಯುತ್ ಹಾಗೂ ನೀರಿನ ಶುಲ್ಕವನ್ನು ಮೂರು ತಿಂಗಳವರೆಗೆ ಮನ್ನಾ ಮಾಡಬೇಕು.
► ಶಾಲೆಗಳಲ್ಲಿ ಹೆಚ್ಚುವರಿ ಡೊನೇಶನ್ ಪಡೆಯದಂತೆ ಸೂಚಿಸಬೇಕು.
► ವಾಹನ ಸಾಲ ಬಡ್ಡಿ ಪಡೆಯದಂತೆ ಕಾನೂನು ರೂಪಿಸಬೇಕು ಹಾಗೂ ಇಎಂಐ ನೀಡುವಂತೆ ದಕ್ಕೆ ಕಡಿವಾಣ ಹಾಕಬೇಕು.