ವಿಪರೀತ ಗಾಯದ ಸಮಸ್ಯೆಯಲ್ಲೂ 2015ರ ವಿಶ್ವಕಪ್ ಸೆಮಿ ಫೆನಲ್‌ನಲ್ಲಿ ಆಡಿದ್ದೆ: ಶಮಿ

Update: 2020-04-17 06:00 GMT

ಹೊಸದಿಲ್ಲಿ, ಎ.16: ಆಸ್ಟ್ರೇಲಿಯ ವಿರುದ್ಧ 2015ರ ವಿಶ್ವಕಪ್ ಸೆಮಿ ಫೈನಲ್ ಪಂದ್ಯದ ವೇಳೆ ವೇಗದ ಬೌಲರ್ ಮುಹಮ್ಮದ್ ಶಮಿ ಗಂಭೀರ ಮೊಣಕಾಲು ನೋವಿನಿಂದ ಬಳಲುತ್ತಿದ್ದರು.ಆದರೆ ಪ್ರಮುಖ ಪಂದ್ಯದಲ್ಲಿ ನಿಮ್ಮ ಬದಲಿಗೆ ಬೇರೊಬ್ಬರನ್ನು ಆಡಿಸಲು ಸಾಧ್ಯವಿಲ್ಲ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರತಿಪಾದಿಸಿದ್ದರು. ಹೀಗಾಗಿ ಶಮಿ ಅವರು ನೋವುನಿವಾರಕ ಗುಳಿಗೆ ಸೇವಿಸಿ ಸೆಮಿ ಫೈನಲ್‌ನಲ್ಲಿ ಆಡಿದ್ದರು.

ಸಿಡ್ನಿಯಲ್ಲಿ ನಡೆದಿದ್ದ ಸೆಮಿ ಫೈನಲ್‌ನಲ್ಲಿ ಶಮಿ ಮೊಣಕಾಲು ನೋವಿನೊಂದಿಗೆ ಆಡಿದ್ದರು. ವೃತ್ತಿಜೀವನಕ್ಕೆ ಬೆದರಿಕೆಯಾಗಿ ಪರಿಣಮಿಸಿದ್ದ ಈ ಗಾಯದ ನಿವಾರಣೆಗಾಗಿ ಶಮಿ 2015ರ ಮಾರ್ಚ್ 26ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2016ರ ಜುಲೈನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿದ್ದರು.

‘‘ವಿಶ್ವಕಪ್ ಸೆಮಿ ಫೈನಲ್‌ಗೆ ಮೊದಲು ನನ್ನಿಂದ ಆಡಲು ಸಾಧ್ಯವಿಲ್ಲ ಎಂದು ನನ್ನ ಸಹ ಆಟಗಾರರಲ್ಲಿ ಹೇಳಿದ್ದೆ. ಪಂದ್ಯದ ದಿನದಂದು ತುಂಬಾ ನೋವಿತ್ತು. ಈ ಬಗ್ಗೆ ನಾನು ಮ್ಯಾನೇಜ್‌ಮೆಂಟ್ ಬಳಿಯೂ ಚರ್ಚಿಸಿದ್ದೆ. ಮಾಹಿ ಭಾಯ್(ಧೋನಿ)ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ನನಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿದರು. ಇದು ಸೆಮಿ ಫೈನಲ್. ನಾವು ಹೊಸ ಬೌಲರ್‌ನೊಂದಿಗೆ ಆಡಲು ಸಾಧ್ಯವಿಲ್ಲ ಎಂದು ಧೋನಿ ಹಾಗೂ ಮ್ಯಾನೇಜ್‌ಮೆಂಟ್ ನನಗೆ ಮನವರಿಕೆ ಮಾಡಿದ್ದರು’’ಎಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್‌ರೊಂದಿಗೆ ನಡೆಸಿದ್ದ ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ಶಮಿ ಹೇಳಿದ್ದಾರೆ.

ಆಸ್ಟ್ರೇಲಿಯದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯುದ್ದಕ್ಕೂ ಶಮಿ ಗಾಯದ ಸಮಸ್ಯೆಯೊಂದಿಗೆ ಆಡಿದ್ದರು. ನೋವುನಿವಾರಕ ಇಂಜೆಕ್ಷನ್ ತೆಗೆದುಕೊಂಡ ಬಳಿಕ ಮೊಣಕಾಲಿಗೆ ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡೇ ನೆಟ್ ಪ್ರಾಕ್ಟೀಸ್ ನಡೆಸಿದ್ದರು. ‘‘2015ರ ವಿಶ್ವಕಪ್‌ನ ವೇಳೆ ನನಗೆ ಗಾಯದ ಸಮಸ್ಯೆ ವಿಪರೀತವಾಗಿತ್ತು. ಪಂದ್ಯಗಳ ಬಳಿಕ ನನಗೆ ನಡೆದಾಡಲೂ ಆಗುತ್ತಿರಲಿಲ್ಲ. ಗಾಯದೊಂದಿಗೇ ಟೂರ್ನಿಯುದ್ದಕ್ಕೂ ಆಡಿದ್ದೆ. ಫಿಸಿಯೋ ನಿತಿನ್ ಪಟೇಲ್ ಅವರ ಆತ್ಮವಿಶ್ವಾಸದ ಮಾತುಗಳಿಂದಾಗಿಯೇ ನಾನು 2015ರ ವಿಶ್ವಕಪ್ ಆಡಿದ್ದೆ. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಮೊಣಕಾಲಿಗೆ ತೀವ್ರತರದ ಗಾಯವಾಗಿತ್ತು. ವೈದ್ಯರು ನನಗೆ ಪ್ರತಿದಿನ ಚಿಕಿತ್ಸೆ ನೀಡುತ್ತಿದ್ದರು. 3 ನೋವುನಿವಾರಕ ಮಾತ್ರೆ ನುಂಗುತ್ತಿದ್ದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News