ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ ಭಾರತದ ಕ್ರಿಕೆಟಿಗ ಮುಹಮ್ಮದ್ ಶಮಿ
ಹೊಸದಿಲ್ಲಿ, ಎ.16: ಭಾರತ ಕೊರೋನ ವೈರಸ್ ಪಿಡುಗಿನ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಿದ್ದರೆ, ಕ್ರಿಕೆಟಿಗ ಮುಹಮ್ಮದ್ ಶಮಿ ತನ್ನ ಮನೆಯ ಹೊರಗೆ ಸಂಭವಿಸಿದ ದುರದೃಷ್ಟಕರ ಘಟನೆಯನ್ನು ವಿವರಿಸಿದ್ದಾರೆ.
ಸಹ ಆಟಗಾರ ಯಜುವೇಂದ್ರ ಚಹಾಲ್ ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂವಹನ ನಡೆಸುವ ವೇಳೆ ಶಮಿ ವಲಸಿಗ ಕಾರ್ಮಿಕರ ದುರವಸ್ಥೆ ಹಾಗೂ ಈಗಿನ ಲಾಕ್‌ಡೌನ್ ಕಾರ್ಮಿಕರ ಮೇಲೆ ಹೇಗೆ ಪರಿಣಾಮಬೀರಿದೆ ಎನ್ನುವುದನ್ನು ವಿವರಿಸಿದರು.
ಘಟನೆಯ ಕುರಿತು ವಿವರಿಸಿದ ಶಮಿ,ವಲಸಿಗ ಕಾರ್ಮಿಕರು ತಮ್ಮ ಹುಟ್ಟೂರು ಬಿಹಾರಕ್ಕೆ ತಲುಪಲು ಯತ್ನಿಸುತ್ತಿದ್ದರು. ತನ್ನ ಮನೆಯ ಸಮೀಪವೇ ವಲಸಿಗ ಕಾರ್ಮಿಕರು ದಣಿದು ಕುಳಿತಿರುವುದು ಮನೆಯ ಸಿಸಿಟಿವಿ ಕ್ಯಾಮರಾದ ಮೂಲಕ ನನ್ನ ಗಮನಕ್ಕೆ ಬಂತು ಎಂದರು.
ಕಾರ್ಮಿಕರು ರಾಜಸ್ಥಾನದಿಂದ ಬಂದಿದ್ದರು. ಅವರಿಗೆ ಲಕ್ನೊದಿಂದ ಸಾಕಷ್ಟು ದೂರವಿರುವ ಬಿಹಾರಕ್ಕೆ ಪ್ರಯಾಣಿಸಬೇಕಾಗಿದೆ. ಆದರೆ ಅವರು ತುಂಬಾ ಹಸಿದಿರುವುದು ನನ್ನ ಮನೆಯ ಸಿಸಿಟಿವಿ ಕ್ಯಾಮರಾದ ಮೂಲಕ ನೋಡಿದೆ. ಕಾರ್ಮಿಕರು ನನ್ನ ಮನೆಯ ಸಮೀಪದಲ್ಲೇ ಇದ್ದರು. ನಾನು ಅವರಿಗೆ ಆಹಾರ ನೀಡಿ, ಸಂಕಷ್ಟದಿಂದ ಹೊರಬರಲು ನೆರವಾದೆ ಎಂದು 29ರ ಹರೆಯದ ಕ್ರಿಕೆಟಿಗ ಹೇಳಿದರು.
‘‘ಇಂತಹ ಸಂಕಷ್ಟದ ಸಮಯದಲ್ಲಿ ನನಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಲು ಯತ್ನಿಸುವೆ. ನನ್ನ ಮನೆ ಬಳಿ ಬಂದಿದ್ದ ಕಾರ್ಮಿಕರು ನಿಜಕ್ಕೂ ತುಂಬಾ ಕಷ್ಟದಲ್ಲಿದ್ದರು. ಹೆದ್ದಾರಿ ಕೂಡ ನನ್ನ ಮನೆ ಬಳಿ ಇದೆ. ಹಾಗಾಗಿ ಕಷ್ಟದಲ್ಲಿರುವ ಜನರನ್ನು ನಾನು ನೋಡಿದ್ದೇನೆ. ಅವರಿಗೆ ಸಾಧ್ಯವಾದಷ್ಟು ನೆರವಾಗುತ್ತಿದ್ದೇನೆ’’ವಎಂದು ಶಮಿ ಹೇಳಿದರು.