ಅಡಿಲೇಡ್ ಓವಲ್‌ನ ಹೊಸ ಹೊಟೇಲ್ ಭಾರತೀಯ ಕ್ರಿಕೆಟ್ ತಂಡಕ್ಕೆ ಕ್ವಾರಂಟೆನ್ ಸೆಂಟರ್!

Update: 2020-04-17 07:46 GMT

ಮೆಲ್ಬೋರ್ನ್, ಎ.16: ಮುಂಬರುವ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅಡಿಲೇಡ್ ಓವಲ್‌ನ ನೂತನ ಹೊಟೇಲ್ ಸಂಭಾವ್ಯ ಕ್ವಾರಂಟೈನ್ ಕೇಂದ್ರವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ದಕ್ಷಿಣ ಆಸ್ಟ್ರೇಲಿಯ ಕ್ರಿಕೆಟ್ ಅಸೋಸಿಯೇಶನ್(ಎಸ್‌ಎಸಿಎ)ಮುಖ್ಯಸ್ಥ ಕೀತ್ ಬ್ರಾಡ್‌ಶಾ ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯಸ್ಥ ಕೇವಿನ್ ರಾಬರ್ಟ್ಸ್‌ರನ್ನು ಭೇಟಿಯಾಗಿ ವಿರಾಟ್ ಕೊಹ್ಲಿ ಬಳಗಕ್ಕೆ ದೇಶಕ್ಕೆ ಬರಲು ಅನುಮತಿ ನೀಡಿದರೆ 42 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೋಟೆಲ್‌ನ್ನು ಕ್ವಾರಂಟೈನ್ ಸೆಂಟರ್ ಆಗಿ ಬಳಸಿಕೊಳ್ಳುವ ಆಫರ್ ನೀಡಿದ್ದಾರೆ ಎಂದು ‘ದಿ ಏಜ್’ ಪತ್ರಿಕೆ ವರದಿ ಮಾಡಿದೆ.

ಮಾರಣಾಂತಿಕ ಕೊರೋನ ವೈರಸ್‌ನ್ನು ಹತ್ತಿಕ್ಕಲು ಆಸ್ಟ್ರೇಲಿಯ ತನ್ನ ಗಡಿಗಳನ್ನು ಮುಚ್ಚಿದ್ದು, ಪ್ರಯಾಣಕ್ಕೆ ನಿರ್ಬಂಧ ವಿಧಿಸಿದೆ. ಕ್ರಿಕೆಟ್ ಸರಣಿಯ ಯೋಜನೆಯಂತೆ ನಡೆದರೆ ಪ್ರವಾಸಿ ತಂಡಗಳ ಆರೋಗ್ಯ ಹಾಗೂ ಸುರಕ್ಷತೆಯನ್ನು ನಿಭಾಯಿಸಲು ಕ್ರಿಕೆಟ್ ಪ್ರಾಧಿಕಾರಗಳು ದಾರಿ ಹುಡುಕಲು ಯತ್ನಿಸುತ್ತಿವೆ.

ಪ್ರವಾಸಿ ತಂಡಗಳಿಗೆ 14 ದಿನಗಳ ಕಡ್ಡಾಯಐಸೋಲೇಶನ್ ಭಾರತೀಯ ಕ್ರಿಕೆಟ್ ತಂಡಕ್ಕೆ ಸಮಸ್ಯೆ ಉಂಟು ಮಾಡಿದೆ. 138 ಕೊಠಡಿಗಳಿರುವ ಓವಲ್ ಹೊಟೇಲ್ ಸೆಪ್ಟಂಬರ್‌ನಲ್ಲಿ ತೆರೆಯುವ ನಿರೀಕ್ಷೆಯಿದೆ. ಈ ಹೊಟೇಲ್‌ನೊಳಗೆ ವಿಶ್ವದ ನಂ.1 ಟೆಸ್ಟ್ ತಂಡ ಭಾರತ ಪ್ರಥಮ ದರ್ಜೆ ವ್ಯವಸ್ಥೆಗಳೊಂದಿಗೆ ತರಬೇತಿ ನಡೆಸಲಿದ್ದು, ಇದರಲ್ಲಿ ನೆಟ್‌ಗಳು ಇವೆ. ಸೂಕ್ತ ಭೋಜನದ ವ್ಯವಸ್ಥೆ ಕೂಡ ಇದೆ.

ಟ್ವೆಂಟಿ-20 ವಿಶ್ವಕಪ್ ಆಸ್ಟ್ರೇಲಿಯದಲ್ಲಿ ಸೆಪ್ಟಂಬರ್ 18ಕ್ಕೆ ಆರಂಭವಾಗಲಿದೆ. ಆದರೆ,ಕೊರೋನ ವೈರಸ್ ಭೀತಿಯು ಈ ಟೂರ್ನಿಯ ಮೇಲೂ ಆವರಿಸಿದೆ. ಭಾರತ ವಿರುದ್ಧ ಟೆಸ್ಟ್ ಸರಣಿ ರದ್ದಾದರೆ ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಟಿವಿ ಆದಾಯದಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News