ಭೋಪಾಲ್: ಬ್ಯಾಂಕ್ ಉದ್ಯೋಗಿಯ ಮೇಲೆ ಅತ್ಯಾಚಾರ
ಭೋಪಾಲ್,ಎ.18: ರಾಜ್ಯ ಸರಕಾರಿ ಸ್ವಾಮ್ಯದ ಬ್ಯಾಂಕ್‌ನ ಮ್ಯಾನೇಜರ್‌ವೊಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಶುಕ್ರವಾರ ಬೆಳಗ್ಗಿನ ಜಾವ ಶಹಪುರ ಪ್ರದೇಶದ ಐಷಾರಾಮಿ ಪ್ರದೇಶದಲ್ಲಿರುವ ಫ್ಲಾಟ್‌ನಲ್ಲಿ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಲಾಕ್‌ಡೌನ್ ಸಮಯದಲ್ಲೇ,ಜನರ ಓಡಾಟಕ್ಕೆ ನಿರ್ಬಂಧವಿರುವ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ರಾಜಧಾನಿಯಲ್ಲಿ ಭದ್ರತೆಗೆ ಸಂಬಂಧಿಸಿ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮಹಿಳೆಯ ಪತಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ತನ್ನ ತವರುಪಟ್ಟಣ ರಾಜಸ್ಥಾನದ ಸಿರೊಹಿ ಜಿಲ್ಲೆಯಲ್ಲಿ ಸಿಲುಕಿಹಾಕಿಕೊಂಡಿದ್ದರು.ಹೀಗಾಗಿ 53ರ ಹರೆಯದ,ದೃಷ್ಟಿ ಸಮಸ್ಯೆ ಇರುವ ಮಹಿಳೆ ಕಳೆದ ಕೆಲವು ಸಮಯದಿಂದ ಫ್ಲಾಟ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.
ಶಂಕಿತ ವ್ಯಕ್ತಿ ಮೆಟ್ಟಿಲುಗಳ ಮೂಲಕ ಎರಡನೇ ಮಾಳಿಗೆಗೆ ಪ್ರವೇಶಿಸಿ ಬಾಲ್ಕನಿಯಲ್ಲಿ ತೆರೆದಿದ್ದ ಬಾಗಿಲ ಮೂಲಕ ಮಹಿಳೆಯ ಫ್ಲಾಟ್‌ನೊಳಗೆ ನುಗ್ಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.