×
Ad

ತಬ್ಲೀಗಿಗಳು 'ಉಗುಳಲು' ಇಸ್ಲಾಮಿಕ್ ಪ್ರವಚನಕಾರನಿಂದ ಕುಮ್ಮಕ್ಕು ಎಂದು ಬಿಂಬಿಸಲು 2017ರ ವೀಡಿಯೊ ಬಳಸಿದ ಇಂಡಿಯಾ ಟಿವಿ !

Update: 2020-04-18 11:39 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಕೋಮು ಬಣ್ಣ ಪಡೆದಿದ್ದು, ಬಹುತೇಕ ಸಾಮಾಜಿಕ ಜಾಲತಾಣಗಳು ಹಾಗೂ ಮುಖ್ಯವಾಹಿನಿ ಮಾಧ್ಯಮಗಳು ಒಂದು ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವುದು ಮಾತ್ರವಲ್ಲದೇ ಉದ್ದೇಶಪೂರ್ವಕವಾಗಿ ಸೋಂಕು ಹರಡುತ್ತಿದೆ ಎಂಬ ಆರೋಪ ಮಾಡುತ್ತಿವೆ.

ನಿಝಾಮುದ್ದೀನ್ ಮರ್ಕಝ್, ಕೋವಿಡ್-19 ಹಾಟ್‌ಸ್ಪಾಟ್ ಎಂದು ಗುರುತಿಸಿದ ಬಳಿಕ ಕೋಮು ಲೇಪ ಬಳಿದು ಹಲವು ಉಗುಳುವ ಹಾಗೂ ಸೀನುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುತ್ತಿರುವುದನ್ನು altnews.in ಸಾಕ್ಷಿ ಸಮೇತ ಬಹಿರಂಗಪಡಿಸಿದೆ.

ಎಪ್ರಿಲ್ 11ರಂದು ಇಂಡಿಯಾ ಟಿವಿ ಇಂಥದ್ದೇ ವೀಡಿಯೊವೊಂದನ್ನು ಪ್ರಸಾರ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಸರ್ಕಾರ ಸಾಂಕ್ರಾಮಿಕ ತಡೆಯಲು ಪ್ರಯತ್ನಿಸುತ್ತಿದ್ದರೂ ತಬ್ಲೀಗಿ‌ನಿಂದಾಗಿ ಇದು ವಿಫಲವಾಗುತ್ತಿದೆ ಎನ್ನುವುದು ಇಂಡಿಯಾ ಟಿವಿ ಪ್ರತಿಪಾದನೆ. ತಬ್ಲೀಗಿಗಳ ವಿರುದ್ಧ ಉಗುಳುವ ಮತ್ತೊಂದು ದೊಡ್ಡ ಆಪಾದನೆ ಇದೆ. ಈ ಉಗುಳುವ ಗೀಳನ್ನು ಎಲ್ಲಿ ಅಂಟಿಸಿಕೊಂಡಿವೆ ? ಯಾವ ಮೌಲಾನಾ ಅವರಿಗೆ ಈ ವೈರಸ್ ರೋಗ ಲಕ್ಷಣ ತಿಳಿಸಿಕೊಟ್ಟಿದ್ದಾರೆ ಎನ್ನುವುದನ್ನು ಇಂಡಿಯಾ ಟಿವಿ ಪತ್ತೆ ಮಾಡಿದೆ ಎಂದು ಹೇಳಿತ್ತು.

ನಿಮ್ಮನ್ನು ನೀವು ಭೂತದಿಂದ ರಕ್ಷಿಸಿಕೊಳ್ಳಲು, ಸುರಾ ಅಲ್ ಇಕ್ಲಾಸ್ ‌ಓದಿ ಎಡ ತೋಳಿನ ಬದಿಗೆ ಮೂರು ಬಾರಿ ಉಗುಳಿ ಎಂದು ಧರ್ಮಪ್ರಚಾರಕರೊಬ್ಬರು ಹೇಳುತ್ತಿರುವ ವೀಡಿಯೊ ತುಣುಕು ಪ್ರಸಾರ ಮಾಡಿತ್ತು. ಅವರು ತಮ್ಮ ಪ್ರವಚನ ಮುಗಿಸುವ ಮುನ್ನ ಅರ್ಧಕ್ಕೇ ಅದನ್ನು ತುಂಡರಿಸಿತ್ತು. ನಿಮಗೆ ನಂಬಿಕೆ ಬರದಿದ್ದರೆ ಮತ್ತೆ ನೋಡಿ ಎಂದು ಮತ್ತೊಮ್ಮೆ ಪ್ರಸಾರ ಮಾಡಿ ತಬ್ಲೀಗಿಗಳು ಯಾಕೆ ಉಗುಳುತ್ತಾರೆ ಎಂದು ಪ್ರಶ್ನಿಸಿತ್ತು. ತಬ್ಲೀಗಿ‌ಗಳು ವೈದ್ಯರು ಹಾಗೂ ನರ್ಸ್‌ಗಳ ಮೇಲೂ ಐಸೋಲೇಶನ್ ವಾರ್ಡ್‌ನಲ್ಲಿ ಉಗುಳುತ್ತಿದ್ದಾರೆ ಎಂಬ ವರದಿಗಳಿವೆ ಎಂದು ಹೇಳಿತ್ತು. ಧರ್ಮಪ್ರಚಾರಕನನ್ನು ಫಯಾಝ್ ಸಯೀದ್ ಎಂದು ಗುರುತಿಸಿದ ಟಿವಿ ಚಾನಲ್ ನಿರೂಪಕ, ವೈದ್ಯರು ಹಾಗೂ ನರ್ಸ್‌ಗಳತ್ತ  ಉಗುಳಿ ಎಂದು ಧರ್ಮ ಬೋಧಿಸುತ್ತದೆಯೇ ? ಎಂದು ಪ್ರಶ್ನಿಸಿದ್ದರು.

ವಾಸ್ತವವಾಗಿ ಈ ವೀಡಿಯೊವನ್ನು ಇಂಡಿಯಾ ಟಿವಿ 3 ವರ್ಷ ಮೊದಲು ಪ್ರಸಾರ ಮಾಡಿತ್ತು. ಐಆರ್‌ಸಿ ಟಿವಿ ಯು ಟ್ಯೂಬ್ ಚಾನಲ್‌ನಲ್ಲಿ 2017ರ ಅಕ್ಟೋಬರ್ 25ರಂದು ಇದನ್ನು ಶೇರ್ ಮಾಡಲಾಗಿತ್ತು. ಫಯಾಝ್ ಸೈಯದ್ ಅವರು ಇಸ್ಲಾಮಿಕ್ ಧರ್ಮನಪ್ರಚಾರಕರಾಗಿದ್ದು, ಇಸ್ಲಾಮಿಕ್ ರೀಸರ್ಚ್ ಸೆಂಟರ್‌ನ ಸಂಸ್ಥಾಪಕರು.

ಅಲ್ಲಾಹನ ಅಸ್ತಿತ್ವದ ಬಗ್ಗೆ ಕೆಟ್ಟ ಯೋಚನೆಗಳು ಬಂದರೆ ಏನು ಮಾಡಬೇಕು ಎನ್ನುವುದು ಹದೀಸ್ ‌ನಲ್ಲಿದೆ ಎನ್ನುವುದನ್ನು ವಾಸ್ತವವಾಗಿ ಫಯಾಝ್ ಉಲ್ಲೇಖಿಸಿದ್ದರು. ಆದರೆ ಕೊರೋನ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಇದನ್ನು ಚಾನಲ್ ದುರ್ಬಳಕೆ ಮಾಡಿಕೊಂಡು, ಉಗುಳಲು ಧರ್ಮಗುರುಗಳೇ ಬೋಧಿಸುತ್ತಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸಿರುವುದು ಇದೀಗ ಸಾಬೀತಾಗಿದೆ.

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News