‘ನ್ಯೂಸ್ ಗಳಲ್ಲಿ ನೋಡಿದ್ದೇನೆ, ನೀವು ಉಗುಳುತ್ತೀರಿ’: ಸ್ಯಾನಿಟೈಸರ್ ಸಿಂಪಡಿಸಲು ಬಂದ ಕಾರ್ಮಿಕನ ಕರ್ತವ್ಯಕ್ಕೆ ಅಡ್ಡಿ

Update: 2020-04-18 10:21 GMT

ಭೋಪಾಲ್: ಭೋಪಾಲ್ ನಗರದ ಜಮಾಲ್ಪುರ್ ಪ್ರದೇಶದಲ್ಲಿ ಸ್ಯಾನಿಟೈಸರ್ ಸಿಂಪಡಿಸಲು ತೆರಳಿದ್ದ ಭೋಪಾಲ್ ಮುನಿಸಿಪಲ್ ಕಾರ್ಪೊರೇಶನ್ ‍ನ ಪೌರ ಕಾರ್ಮಿಕರೊಬ್ಬರು ಕೊರೋನ ಸೋಂಕು ಹರಡುವ ಸಲುವಾಗಿ ‘ಉದ್ದೇಶಪೂರ್ವಕವಾಗಿ ಉಗುಳಿದ್ದಾರೆ' ಎಂದು ಸ್ಥಳೀಯನೊಬ್ಬ ಆರೋಪಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ ಎಂದು thequint.com ವರದಿ ಮಾಡಿದೆ.

ಇದನ್ನು ತಿಳಿದ ಕಾರ್ಮಿಕ ಶೋಯೆಬ್ ರ ಸಹೋದ್ಯೋಗಿಯಾದ ರಾಹುಲ್ ಡೋಂಗರ್ ರಕ್ಷಣೆಗೆ ಧಾವಿಸಿದಾಗ ಅವರ ವಿರುದ್ಧವೂ ಅದೇ ಆರೋಪ ಮಾಡಿದ್ದಾನೆ. ಈ ಘಟನೆಯನ್ನು ರಾಹುಲ್ ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ.

“50 ಬೇರೆ ಬೇರೆ ಕಡೆಗಳಲ್ಲಿ ಉಗುಳಿ ಕೊರೋನ ವೈರಸ್ ಹರಡಿದ್ದಾರೆಂಬ ವಿವಿಧ ಮಾಧ್ಯಮ ವರದಿಗಳಿಂದಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ನಂಬಲು ಸಿದ್ಧನಿಲ್ಲ'' ಎಂದು ಗುಲಾಬಿ ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

“ನಾವು ಉಗುಳಿದ್ದೇವೆ ಎಂಬುದಕ್ಕೆ ಸಾಕ್ಷಿ ಏನಿದೆ” ಎಂದು ರಾಹುಲ್ ಕೇಳಿದಾಗ ಆ ವ್ಯಕ್ತಿ “ನೀವು ಉಗುಳುವುದನ್ನು ನೋಡಿದ್ದೇನೆ. ನಿಮ್ಮನ್ನು ನಂಬಲು ಸಾಧ್ಯವಿಲ್ಲ. ಯಾರು ಕೂಡ ನಂಬದ ಒಂದು ಸಮುದಾಯವಿದೆ'' ಎಂದು ಹೇಳುತ್ತಾನೆ.

ಪೌರ ಕಾರ್ಮಿಕ ಶೋಯೆಬ್ ಟೊಪ್ಪಿ ಧರಿಸಿದ್ದನ್ನೇ ನೆಪವಾಗಿಟ್ಟುಕೊಂಡು ಸ್ಥಳೀಯ ವ್ಯಕ್ತಿ ಮನೆಯಿಂದ ಹೊರಗೆ ಬಂದು ಆತನ ಕಾಲರ್ ಹಿಡಿದು ಆಧಾರ್ ಕಾರ್ಡ್ ತೋರಿಸೆಂದು ಗದರಿಸಿದಾಗ ರಾಹುಲ್ ಮಧ್ಯ ಪ್ರವೇಶಿಸಿದ್ದರು.

ವೀಡಿಯೋದ ಕೊನೆಯಲ್ಲಿ ರಾಹುಲ್ ತಾವು ಈ ಪ್ರದೇಶದಲ್ಲಿ ಸ್ಯಾನಿಟೈಸರ್ ಸಿಂಪಡಿಸುವುದಿಲ್ಲ ಎಂದು ಹೇಳುವುದು ಕೇಳಿಸುತ್ತದೆ. ರಾಹುಲ್ ಹಾಗೂ ಶೋಯೆಬ್ ಇಬ್ಬರೂ ಕಳೆದ 12 ವರ್ಷಗಳಿಂದ ಭೋಪಾಲ್ ‍ನಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News