×
Ad

ಕಣ್ಣನ್ ಗೋಪಿನಾಥನ್, ಪ್ರಶಾಂತ್ ಭೂಷಣ್ ವಿರುದ್ಧ ಎಫ್‌ಐಆರ್

Update: 2020-04-18 23:30 IST

ಹೊಸದಿಲ್ಲಿ, ಎ.18: ಕೊರೋನ ವೈರಸ್ ಹಾವಳಿ ವಿರುದ್ಧ ಸರಕಾರದ ಕ್ರಮಗಳನ್ನು ಟೀಕಿಸಿ ಟ್ವೀಟ್ ಮಾಡಿದ್ದಕ್ಕಾಗಿ ಹಿರಿಯ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಭೂಷಣ್ ಹಾಗೂ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ವಿರುದ್ಧ ಗುಜರಾತ್ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಶಾಂತ್ ಭೂಷಣ್ ಹಾಗೂ ಕಣ್ಣನ್ ವಿರುದ್ಧ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ, ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದ ಹಾಗೂ ಕ್ರಿಮಿನಲ್ ಸಂಚಿನ ಆರೋಪಗಳನ್ನು ಹೊರಿಸಲಾಗಿದೆ.

‘‘ಆತ್ಮೀಯ ಮೋದಿಯವರೇ ನಿಮಗೆ ಅಮಿತ್‌ ಶಾ ಅವರನ್ನು ಉಚ್ಟಾಟಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನೀವು ಅವರಿಗೆ ಹೆದರುತ್ತಿರಿ. ಆದರೂ ಪರವಾಗಿಲ್ಲ. ಅವರನ್ನು ಮಾಹಿತಿ ಹಾಗೂ ಪ್ರಸಾರದಂತಹ ಲಘುವಾದ ಸಚಿವ ಖಾತೆಗೆ ಹೊಂದುವಂತೆ ಮಾಡಿ. ಈ ನಿಟ್ಟಿನಲ್ಲಿ ಪ್ರಕಾಶ್ ಜಾವ್ಡೇಕರ್ ಏನಾದರೂ ನೆರವು ನೀಡಬಹುದು’’ ಎಂದು ಗೋಪಿನಾಥನ್ ಮಾರ್ಚ್ 30ರಂದು ಟ್ವೀಟಿಸಿದ್ದರು. ಅದನ್ನು ಪ್ರಶಾಂತ್‌ ಭೂಷಣ್ ರೀಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ಸಂಬಂಧಿಸಿ ಪೊಲೀಸರು ಗೋಪಿನಾಥನ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 295 ಎ, 505 (1),34,120ಬಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.

ಮಾರ್ಚ್ 28ರಂದು ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿ ಪ್ರಶಾಂತ್ ಭೂಷಣ್ ವಿರುದ್ಧ ಇನ್ನೊಂದು ಎಫ್‌ಐಆರ್ ದಾಖಲಿಸಲಾಗಿದೆ. ‘‘ಲಾಕ್‌ಡೌನ್ ಹೇರಿಕೆಯಿಂದಾಗಿ ಕೋಟ್ಯಂತರ ಮಂದಿ ಹಸಿವಿನೊಂದಿಗೆ ನೂರಾರು ಮೈಲು ನಡೆದುಕೊಂಡು ಹೋಗುತ್ತಿದ್ದರೆ, ನಮ್ಮ ಹೃದಯಹೀನ ಸಚಿವರು ರಾಮಾಯಣ ಹಾಗೂ ಮಹಾಭಾರತವನ್ನು ಅಸ್ವಾದಿಸುತ್ತಿದ್ದಾರೆ ಹಾಗೂ ಜನರಿಗೆ ಉಣಬಡಿಸುತ್ತಿದ್ದಾರೆ’’ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು.

ಕೊರೋನಾ ಹಾವಳಿಯ ಸಮಯದಲ್ಲಿ ಪ್ರಕಾಶ್ ಜಾವ್ಡೇಕರ್ ಅವರು ರಾಮಾಯಣ ಟಿವಿ ಧಾರಾವಾಹಿ ವೀಕ್ಷಿಸುವ ಫೋಟೋವನ್ನು ಟ್ವೀಟ್ ಮಾಡಿದ್ದಕ್ಕೆ ಪ್ರಶಾಂತ್ ಭೂಷಣ್ ಹೀಗೆ ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News