ಆತ್ಮಹತ್ಯೆಗೆ ಮುನ್ನ ವಲಸೆ ಕಾರ್ಮಿಕನ ಕೊನೆಯ ಸಂಪಾದನೆ: ಮೊಬೈಲ್ ಮಾರಿ 2500 ರೂ.

Update: 2020-04-19 03:51 GMT
ಸಾಂದರ್ಭಿಕ ಚಿತ್ರ

ಗುರುಗಾಂವ್ : ನಗರದಲ್ಲಿ ಪೈಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ಛಬೂ ಮಂಡಲ್ (35) ಗುರುವಾರ ತಮ್ಮ ಮೊಬೈಲನ್ನು 2500 ರೂಪಾಯಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ಫ್ಯಾನ್ ಮತ್ತು ಕುಟುಂಬಕ್ಕೆ ಆಹಾರ ಖರೀದಿಸಿ ತಂದರು.

ಗುರುವಾರದಿಂದ ಉಪವಾಸವಿದ್ದ ಪತ್ನಿ, ಪೋಷಕರು, ಐದು ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳಿಗೆ ಖುಷಿಯೋ ಖುಷಿ. ಅದಕ್ಕೂ ಮುನ್ನ ಉಚಿತವಾಗಿ ವಿತರಣೆಯಾಗುತ್ತಿದ್ದ ಊಟ, ಅಕ್ಕಪಕ್ಕದವರ ಉದಾರತೆಯೇ ಅವರಿಗೆ ಅನ್ನದ ಮೂಲವಾಗಿತ್ತು.

ಕುಟುಂಬದವರು ಹೊರಗೆ ಹೋದ ಸಮಯಕ್ಕಾಗಿ ಕಾಯುತ್ತಿದ್ದ ಮಂಡಲ್, ಗುಡಿಸಲಿನ ಬಾಗಿಲು ಮುಚ್ಚಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ. ಲಾಕ್‌ಡೌನ್ ಆರಂಭವಾದ ಮೇಲೆ ಊಟಕ್ಕೆ ಕೂಡಾ ತೊಂದರೆಯಾಗಿತ್ತು. ಕೆಲಸ ಇಲ್ಲ; ಹಣ ಇಲ್ಲ. ಉಚಿತವಾಗಿ ನೀಡುವ ಆಹಾರವನ್ನೇ ಅವಲಂಬಿಸಿ ಇರಬೇಕಿತ್ತು. ಆದರೆ ಅದು ಕೂಡಾ ಪ್ರತಿದಿನ ಬರುತ್ತಿರಲಿಲ್ಲ ಎಂದು ಪತ್ನಿ ಹೇಳುತ್ತಾರೆ.

ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎಂದು ಗುರುಗಾಂವ್ ಪೊಲೀಸರು ಹೇಳಿದ್ದಾರೆ. ಕಾರ್ಮಿಕನ ಕುಟುಂಬಕ್ಕೆ ಆಹಾರಕ್ಕೆ ತೊಂದರೆ ಇರಲಿಲ್ಲ. ಮನೆಯಲ್ಲಿ ಇನ್ನೂ ಸಾಕಷ್ಟು ಆಹಾರ ಸಾಮಗ್ರಿ ಇತ್ತು ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಬಿಹಾರದ ಮಾಧೇಪುರ ಜಿಲ್ಲೆಯ ಮಂಡಲ್ 15 ವರ್ಷ ಹಿಂದೆ ಗುರುಗಾಂವ್‌ಗೆ ಆಗಮಿಸಿ ಪೈಂಟರ್ ಕೆಲಸಕ್ಕೆ ಸೇರಿಕೊಂಡಿದ್ದ. 10 ವರ್ಷದ ಹಿಂದೆ ವಿವಾಹವಾದ ಬಳಿಕ ನಗರದ ಸರಸ್ವತಿಕುಂಜ್‌ನಲ್ಲಿ 1500 ರೂಪಾಯಿಗೆ ಬಾಡಿಗೆ ಮನೆ ಹಿಡಿದಿದ್ದ. ಹಲವು ತಿಂಗಳುಗಳಿಂದ ಕೆಲಸ ಇಲ್ಲದೇ ಸಂಕಷ್ಟಕ್ಕೀಡಾಗಿದ್ದ. ಲಾಕ್‌ಡೌನ್ ಬಳಿಕವಂತೂ ಪರಿಸ್ಥಿತಿ ಹದಗೆಟ್ಟಿತ್ತು.

ಸುಮಾರು 10 ಸಾವಿರ ರೂ. ಮೌಲ್ಯದ ಮೊಬೈಲನ್ನು ಗುರುವಾರ ಬೆಳಗ್ಗೆ ಮಾರಾಟ ಮಾಡಿ ಆಹಾರ ತರಲು ನಿರ್ಧರಿಸಿದರು. ಅಕ್ಕಿ, ಬೇಳೆ ಹಾಗೂ ಶೀಟ್ ಮನೆಯಲ್ಲಿ ಸೆಖೆ ತಡೆಯಲಾಗುತ್ತಿಲ್ಲ ಎಂದು ಫ್ಯಾನ್ ಖರೀದಿಸಿ ತಂದಿದ್ದರು ಎಂದು ಪತ್ನಿ ಪೂನಂ ಹೇಳುತ್ತಾರೆ.
ಮೊಬೈಲ್ ಮಾರಾಟದಿಂದ ಬಂದ 2500 ರೂಪಾಯಿಗಳೇ ಆತನ ಕೊನೆಯ ಆದಾಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News