ಕೇರಳ ಲಾಕ್‌ಡೌನ್ ಸೋಮವಾರದಿಂದ ಸಡಿಲ; ಏನುಂಟು ? ಏನಿಲ್ಲ ?

Update: 2020-04-19 04:46 GMT

ತಿರುವನಂತಪುರಂ : ಕೇರಳದಲ್ಲಿ ಸೋಮವಾರದಿಂದ ಲಾಕ್‌ಡೌನ್ ಭಾಗಶಃ ಸಡಿಲವಾಗಲಿದ್ದು, ರಾಜ್ಯದ 14 ಜಿಲ್ಲೆಗಳ ಪೈಕಿ 7 ಜಿಲ್ಲೆಗಳಲ್ಲಿ ರೆಸ್ಟೋರೆಂಟ್‌ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಅಂತೆಯೇ ಸರಿ- ಬೆಸ ನಿಯಮದಡಿ ಸೀಮಿತ ಸಂಖ್ಯೆಯ ವಾಹನಗಳ ಸಂಚಾರಕ್ಕೆ ಕೂಡಾ ಅನುಮತಿ ನೀಡಲಾಗಿದೆ.

21 ದಿನಗಳ ಲಾಕ್‌ಡೌನ್ ಮುಗಿಯುವ ಹಂತದಲ್ಲೇ ಕೇರಳವನ್ನು ಕೆಂಪು, ಆರೆಂಜ್ ಎ, ಆರೆಂಜ್ ಬಿ ಹಾಗೂ ಹಸಿರು ವಲಯಗಳನ್ನಾಗಿ ವಿಭಾಗಿಸಿ ಕೊನೆಯ ಮೂರು ವಲಯಗಳಲ್ಲಿ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲು ಅನುಮತಿ ಕೋರಿತ್ತು. ರಾಜ್ಯದಲ್ಲಿ ಕಳೆದ ಒಂದು ವಾರದಿಂದ  ಕೊರೋನ ವೈರಸ್ ಪಾಸಿಟಿವ್ ಪ್ರಕರಣಗಳು ಒಂದಂಕಿಗೆ ಇಳಿದಿದ್ದು, ಗುಣಮುಖರಾದವರ ಸಂಖ್ಯೆಯೂ ಹೆಚ್ಚುತ್ತಿದೆ.

ಹಸಿರು ವಲಯದ ಕೊಟ್ಟಾಯಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಬರಲಿದೆ. ಕಿತ್ತಳೆ ಬಿ ವಲಯದಲ್ಲಿ ಅಂದರೆ ತಿರುವನಂಪುರ, ಅಲಪ್ಪುಝ, ತ್ರಿಶ್ಶೂರ್, ಪಾಲಕ್ಕಾಡ್ ಹಾಗೂ ವಲನಾಡ್ ಜಿಲ್ಲೆಗಳಲ್ಲೂ ಹಲವು ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ.
ಕೊಟ್ಟಾಯಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಹೋಟೆಲ್‌ಗಳು ದಿನವಿಡೀ ತೆರೆದಿರುತ್ತವೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 7ವರೆಗೆ ಮಾತ್ರ ತೆರೆದಿರುತ್ತವೆ. ಆದರೆ ಸುರಕ್ಷಿತ ಅಂತರ ಕಾಪಾಡುವುದು ಮತ್ತು ಕೈಗಳನ್ನು ಸ್ವಚ್ಛಗೊಳಿಸುವುದು ಅಗತ್ಯ. ಮನೆಯಿಂದ ಹೊರಡುವಾಗ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು.

ಬೆಸ ಸಂಖ್ಯೆಯ ವಾಹನಗಳಿಗೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ, ಸರಿ ಸಂಖ್ಯೆಯ ವಾಹನಗಳಿಗೆ ಮಂಗಳವಾರ, ಗುರುವಾರ ಹಾಗೂ ಶನಿವಾರ ಸಂಚರಿಸಲು ಅನುಮತಿ ನೀಡಲಾಗಿದೆ. ತುರ್ತು ಕಾರ್ಯಾಚರಣೆಗಳಿಗೆ ವಿನಾಯ್ತಿ ಇರುತ್ತದೆ. ಮಹಿಳಾ ಚಾಲಕರಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಹಿಂಬದಿ ಸೀಟಿನಲ್ಲಿ ಇಬ್ಬರು ಪ್ರಯಾಣಿಸಬಹುದು. ದ್ವಿಚಕ್ರ ವಾಹನದಲ್ಲಿ ಕುಟುಂಬ ಸದಸ್ಯರನ್ನಷ್ಟೇ ಹಿಂದೆ ಕೂರಿಸಿಕೊಂಡು ಹೋಗಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News