ಒತ್ತಡದಲ್ಲಿ ಆಡುವಾಗ ಕಣ್ಣೀರು ಹಾಕಿದ್ದೆ : ಸುನೀಲ್ ಚೆಟ್ರಿ

Update: 2020-04-19 08:17 GMT

ಹೊಸದಿಲ್ಲಿ, ಎ.19: ‘‘ತನ್ನ ವೃತ್ತಿಜೀವನದ ಆರಂಭದಲ್ಲಿ ಕೋಲ್ಕತಾದಲ್ಲಿ ಫುಟ್ಬಾಲ್ ಪಂದ್ಯ ಆಡುತ್ತಿದ್ದಾಗ ಹೆಚ್ಚಿನ ಒತ್ತಡದಲ್ಲಿದ್ದೆ. ಹಲವು ಬಾರಿ ಕಣ್ಣೀರಿಟ್ಟಿದ್ದೆ. ಒಂದು ಹಂತದಲ್ಲಿ ಕ್ರೀಡೆಯನ್ನು ತ್ಯಜಿಸುವ ಯೋಚನೆಯನ್ನು ಮಾಡಿದ್ದೆ’’ಎಂದು ಭಾರತದ ಓರ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ ಬಹಿರಂಗಪಡಿಸಿದರು.

ಚೆಟ್ರಿ ತನ್ನ 17ನೇ ವಯಸ್ಸಿನಲ್ಲಿ ಕೋಲ್ಕತಾದ ಪ್ರಮುಖ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್ ಪರ ಮೊದಲ ವೃತ್ತಿಪರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಕಿರಿಯ ವಯಸ್ಸಿನಲ್ಲಿ ಒತ್ತಡದಿಂದ ಹೊರಬರುವುದು ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

 ‘‘ಮೊದಲ ವರ್ಷ ಚೆನ್ನಾಗಿತ್ತು. ಪಂದ್ಯಗಳಲ್ಲಿನ 20 ಅಥವಾ 30 ನಿಮಿಷಗಳ ವಿರಾಮವನ್ನು ಬಳಸಿಕೊಳ್ಳುತ್ತಿದ್ದೆ. ನಾನು ಭವಿಷ್ಯದ ಭೈಚುಂಗ್ ಭುಟಿಯಾ ಎಂದು ಜನರು ಹೊಗಳಾರಂಭಿಸಿದ್ದರು. ಕೋಲ್ಕತಾದಲ್ಲಿನ ಫುಟ್ಬಾಲ್ ನಿಮಗೆ ಬೇಗನೆ ಪಾಠ ಕಲಿಸುತ್ತದೆ’’ಎಂದರು.

‘‘ನೀವು ಸೋಲಲು ಆರಂಭಿಸಿದರೆ ಜನರು ಸಹಿಸಿಕೊಳ್ಳುತ್ತಿರಲಿಲ್ಲ. ಆಗ ನಾನು ಅಳುತ್ತಿದ್ದೆ. ಕೋಲ್ಕತಾದಲ್ಲಿ ಸೋಲು ಒಂದು ಆಯ್ಕೆಯಲ್ಲ. ಹಲವು ಆಟಗಾರರು ಫುಟ್ಬಾಲ್‌ನ್ನು ತ್ಯಜಿಸಿದ್ದರು. ನನ್ನನ್ನು ಬೆಚ್ಚಿಬೀಳಿಸಿದ ಉದಾಹರಣೆಗಳಿವೆ. ಒಮ್ಮೆ ನಾನು ತಂದೆಯನ್ನು ಮನೆಗೆ ತೆರಳುವಂತೆ ಹೇಳಿದ್ದೆ. ನಾನು ಫುಟ್ಬಾಲ್‌ನ್ನು ತ್ಯಜಿಸುವ ಯೋಚನೆ ಮಾಡಿದ್ದೆ. ಆದರೆ ನನ್ನ ಕುಟುಂಬ ಬೆಂಬಲಕ್ಕೆ ನಿಂತಿತ್ತು. ಹೀಗಾಗಿ ಈ ಕ್ರೀಡೆಯಲ್ಲಿ ಮುಂದುವರಿದಿದ್ದೇನೆ’’ಎಂದು 35ರ ಹರೆಯದ ಚೆಟ್ರಿ ಹೇಳಿದ್ದಾರೆ.

‘‘ನನಗೆ ಕುಟುಂಬ ಸದಸ್ಯರು ಸಾಕಷ್ಟು ಬೆಂಬಲ ನೀಡಿದ್ದಾರೆ. ಪ್ರತಿ ಬಾರಿಯೂ ನನ್ನ ತಂದೆ ನನ್ನೊಂದಿಗೆ ಇರುತ್ತಿದ್ದರು. ನಾವಿಬ್ಬರೂ ಮಾತನಾಡಿದ ಬಳಿಕ ಎಲ್ಲವೂ ಸುಲಭವಾಗುತ್ತಿತ್ತು. ಇದೀಗ ನಾನು 18 ವರ್ಷಗಳಿಂದ ಫುಟ್ಬಾಲ್ ಆಡುತ್ತಿದ್ದೇನೆ’’ಎಂದು ಚೆಟ್ರಿ ಹೇಳಿದರು.

ಚೆಟ್ರಿ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಸಿಕಂದರಾಬಾದ್‌ನಲ್ಲಿ ಚೆಟ್ರಿ ಜನಿಸಿದ್ದರು. ಆ ಬಳಿಕ ಹೊಸದಿಲ್ಲಿಯಲ್ಲಿ ಚೆಟ್ರಿ ಕುಟುಂಬ ನೆಲೆ ನಿಂತಿತ್ತು. ಚೆಟ್ರಿ ತಾಯಿ ನೇಪಾಳ ರಾಷ್ಟ್ರೀಯ ತಂಡದ ಪರ ಆಡಿದ್ದರು. ಚೆಟ್ರಿಯ ತಂದೆ ತನ್ನ ಬೆಟಾಲಿಯನ್ ತಂಡದಲ್ಲಿದ್ದರು.

‘‘ನನಗೆ ಕ್ರೀಡೆ ಕಷ್ಟವೆನಿಸಲಿಲ್ಲ. ನಾನು ಹಲವಾರು ಕ್ರೀಡೆಗಳನ್ನು ಆಡುತ್ತಿದ್ದೆ. ನನ್ನ ಕೈ-ಕಣ್ಣಿನ ಸಮನ್ವಯಕ್ಕೆ ಹಲವು ಕ್ರೀಡೆಗಳು ನೆರವಿಗೆ ಬಂದಿದೆ ಎಂದು ಈಗ ಅರ್ಥವಾಗುತ್ತಿದೆ. ನನ್ನ ತಾಯಿಯೇ ನನ್ನ ದೊಡ್ಡ ಸ್ಪರ್ಧಿಯಾಗಿದ್ದರು. ಚೈನೀಸ್ ಚೆಕರ್ಸ್, ಚೆಸ್, ಕೇರಂ, ವಾಲಿಬಾಲ್, ಬ್ಯಾಡ್ಮಿಂಟನ್, ಫುಟ್ಬಾಲ್ ಹಾಗೂ ಕುಸ್ತಿ ಸ್ಪರ್ಧೆಯಲ್ಲಿ ಅಮ್ಮನನ್ನು ಸೋಲಿಸಲು ಯತ್ನಿಸುತ್ತಿದ್ದೆ’’ ಎಂದು ಪೋರ್ಚುಗಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಬಳಿಕ ವಿಶ್ವದಲ್ಲಿ ಸಕ್ರಿಯ ಫುಟ್ಬಾಲ್ ಆಟಗಾರರ ಪೈಕಿ ಗರಿಷ್ಠ ಗೋಲು ಗಳಿಸಿದ ಎರಡನೇ ಆಟಗಾರನಾಗಿರುವ ಚೆಟ್ರಿ ಹೇಳಿದರು.

ಚೆಟ್ರಿ 2005ರಲ್ಲಿ ಪಾಕಿಸ್ತಾನ ವಿರುದ್ಧ ಆಡುವುದರೊಂದಿಗೆ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ಗೆ ಕಾಲಿಟ್ಟಿದ್ದರು. ಭುಟಿಯಾ ಹಾಗೂ ರೆನೆಡಿ ಸಿಂಗ್ ಅವರು ಚೆಟ್ರಿಗೆ ರಾಷ್ಟ್ರೀಯ ತಂಡದಲ್ಲಿ ಆರಂಭಿಕ ದಿನಗಳಲ್ಲಿ ಅನಗತ್ಯ ಒತ್ತಡ ಉಂಟಾಗದಂತೆ ನೋಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News