ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳ: ಲಾಕ್‌ಡೌನ್ ನಿಯಮ ಸಡಿಲಿಸದಿರಲು ದಿಲ್ಲಿ ಸರಕಾರದ ನಿರ್ಧಾರ

Update: 2020-04-19 17:15 GMT

ಹೊಸದಿಲ್ಲಿ,ಎ.19: ದಿಲ್ಲಿಯಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಲಾಕಡೌನ್ ನಿಯಮಗಳನ್ನು ಸಡಿಲಿಸದಿರಲು ಸರಕಾರವು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರವಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದಿಲ್ಲಿಯಲ್ಲಿ ಈವರೆಗೆ ಸುಮಾರು 1,900 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು,42 ಜನರು ಮೃತಪಟ್ಟಿದ್ದಾರೆ.

ಇನ್ನೊಂದು ವಾರದಲ್ಲಿ ಪರಿಸ್ಥಿತಿಯ ಬಗ್ಗೆ ತಜ್ಞರೊಡನೆ ಪುನರ್‌ಪರಿಶೀಲನೆ ನಡೆಸಿದ ಬಳಿಕವಷ್ಟೇ ನಿರ್ಬಂಧಗಳನ್ನು ಸಡಿಲಿಸಬಹುದೇ ಎಂಬ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವುದಾಗಿ ಕೇಜ್ರಿವಾಲ್ ತಿಳಿಸಿದರು.

ದಿಲ್ಲಿಯಲ್ಲಿ ಶನಿವಾರ ಯಾವುದೇ ರೋಗಲಕ್ಷಣಗಳಿರದ 186 ಜನರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ. ಇದು ಚಿಂತೆಯ ವಿಷಯವಾಗಿದೆ,ಏಕೆಂದರೆ ತಾವು ಸೋಂಕಿನ ವಾಹಕರಾಗಿದ್ದೇವೆ ಮತ್ತು ಅದನ್ನು ಇತರರಿಗೂ ಹರಡುತ್ತಿದ್ದೇವೆ ಎನ್ನುವುದೇ ಜನರಿಗೆ ಗೊತ್ತಿರುವುದಿಲ್ಲ ಎಂದ ಅವರು,ದಿಲ್ಲಿಯ ಎಲ್ಲ ಹನ್ನೊಂದೂ ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ಗಳು ಮತ್ತು 77 ಪ್ರದೇಶಗಳನ್ನು ನಿಯಂತ್ರಣ ವಲಯಗಳೆಂದು ಘೋಷಿಸಲಾಗಿದೆ. ಕೇಂದ್ರದ ಮಾರ್ಗಸೂಚಿಗಳಂತೆ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸುವಂತಿಲ್ಲ. ಲಾಕ್‌ಡೌನ್ ನಿಯಮಗಳನ್ನು ಪಾಲಿಸುವ ಮೂಲಕ ಜನರು ಶಿಸ್ತನ್ನು ಪ್ರದರ್ಶಿಸಿರುವ ಪ್ರದೇಶಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದರು.

ನಿರ್ಬಂಧಗಳು ಚಾಲ್ತಿಯಲ್ಲಿರುವುದು ಅಗತ್ಯವಾಗಿದೆ ಎಂದ ಕೇಜ್ರಿವಾಲ್,ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗದಿರುವ ಬಗ್ಗೆ,ಜನರು ತಮ್ಮ ಜೀವನೋಪಾಯ ಗಳಿಕೆಯಿಂದ ವಂಚಿತರಾಗಿರುವ ಬಗ್ಗೆ ತನಗೂ ಕಳವಳವಿದೆ. ಆದರೆ ಲಾಕ್‌ಡೌನ್ ಸಡಿಲಿಸಿ ಪರಿಸ್ಥಿತಿ ಬಿಗಡಾಯಿಸಿದರೆ? ಐಸಿಯುಗಳು ಮತ್ತು ವೆಂಟಿಲೇಟರ್‌ಗಳ ಕೊರತೆಯೂ ಕಾಡಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News