ಮುಸ್ಲಿಮರಿಗೆ ಕಿರುಕುಳ ನೀಡುತ್ತಿರುವುದನ್ನು ತಡೆಯಿರಿ: ಅಮಿತ್ ಶಾಗೆ ಅಲ್ಪಸಂಖ್ಯಾತರ ಆಯೋಗ ಪತ್ರ

Update: 2020-04-19 18:17 GMT

ಹೊಸದಿಲ್ಲಿ, ಎ.19: ಕೊರೋನ ಸೋಂಕು ಹಿನ್ನೆಲೆಯಲ್ಲಿ ಇದೀಗ ದೇಶದಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡುವ ಪ್ರಕರಣ ಹೆಚ್ಚುತ್ತಿದ್ದು ಇದನ್ನು ತಡೆಗಟ್ಟಲು ದಿಲ್ಲಿ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ದಿಲ್ಲಿಯ ಅಲ್ಪಸಂಖ್ಯಾತರ ಆಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಆಗ್ರಹಿಸಿದೆ.

ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿ ಮಾಧ್ಯಮದಲ್ಲಿ ಹೇಳಿಕೆ ನೀಡುವ ಸಂದರ್ಭ ಸರಕಾರಿ ಅಧಿಕಾರಿಗಳು ತೋರುವ ನಿರ್ಲಕ್ಷದಿಂದಾಗಿ ಜನಸಾಮಾನ್ಯರು ತಬ್ಲೀಗಿ ಕಾರ್ಯಕರ್ತರನ್ನು ಸಾಮಾನ್ಯ ಮುಸ್ಲಿಮರೊಂದಿಗೆ ಸಮೀಕರಿಸುತ್ತಿದ್ದಾರೆ. ಎಲ್ಲಾ ತಬ್ಲೀಗಿಗಳೂ ಮುಸ್ಲಿಮರು. ಆದರೆ ಎಲ್ಲಾ ಮುಸ್ಲೀಮರೂ ತಬ್ಲೀಗಿಗಳಲ್ಲ . ಆದರೆ ಪೊಲೀಸರು ಹಾಗೂ ಅಧಿಕಾರಿಗಳು ಈ ಪ್ರಕರಣವನ್ನು ನಿರ್ವಹಿಸಿದ ರೀತಿಯಿಂದ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮುಸ್ಲಿಮರು ಕಿರುಕುಳಕ್ಕೆ ಒಳಗಾಗುವಂತಾಗಿದೆ ಎಂದು ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಮ್‌ಖಾನ್ ಹಾಗೂ ಸದಸ್ಯ ಕರ್ತಾರ್ ಸಿಂಗ್ ಕೊಚ್ಚಾರ್ ಹೇಳಿದ್ದಾರೆ.

ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ತಬ್ಲೀಗಿ ಜಮಾಅತ್ ನಡೆಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರದ ಜಮಾಅತ್ ಸದಸ್ಯರಿಗೂ ಕಿರುಕುಳ ನೀಡಲಾಗುತ್ತಿದೆ. ತಬ್ಲೀಗಿ ಜಮಾಅತ್‌ನ ಆಡಳಿತದ ಒಂದು ಭಾಗದವರು ಕೊರೋನ ವೈರಸ್‌ನ ಭೀಕರತೆ ಮತ್ತು ಇದರಿಂದ ಉಂಟಾಗಬಹುದಾದ ಪರಿಣಾಮವನ್ನು ಊಹಿಸಲು ವಿಫಲವಾಗಿದೆ. ಆದರೆ ಇದರಲ್ಲಿ ಯಾವುದೇ ಪಿತೂರಿಯಿಲ್ಲ. ತುರ್ಕ್‌ಮಾನ್ ಗೇಟ್‌ನಲ್ಲಿ ಕೇಂದ್ರಕಚೇರಿ ಹೊಂದಿರುವ ಜಮಾಅತ್‌ನ ಇನ್ನೊಂದು ಭಾಗದವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನೂ ಮಾರ್ಚ್ ಆರಂಭದಲ್ಲೇ ರದ್ದುಮಾಡಿದ್ದರು. ಅಲ್ಲದೆ ಇಂತಹ ಹಲವಾರು ಘಟನೆಗಳು ದಿಲ್ಲಿ ಮತ್ತು ದೇಶದೆಲ್ಲೆಡೆ ನಡೆದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

 ತಬ್ಲೀಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸುವಂತೆ ಆದೇಶಿಸಿದ್ದರಲ್ಲೂ ತಪ್ಪಿಲ್ಲ. ಆದರೆ ಈ ಸರಿಯಾದ ಕಾರ್ಯಕ್ರಮ, ಸರಕಾರಿ ಅಧಿಕಾರಿಗಳ ಅಸಂವೇದನಾಶೀಲ ಹೇಳಿಕೆ ಮತ್ತು ಮಾಧ್ಯಮಗಳ ವೈಭವೀಕರಿಸಿದ ವರದಿಯಿಂದಾಗಿ ಎರಡು ಹೊಸ ತಪ್ಪು ಹಾದಿಯಲ್ಲಿ ಸಾಗಿತು ಎಂದು ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News