ಲಾಕ್‌ಡೌನ್ ಹಿನ್ನೆಲೆ: ಪೈಂಟಿಂಗ್, ಒಳಾಂಗಣ ತರಬೇತಿಯಲ್ಲಿ ಕುಲದೀಪ್ ಯಾದವ್ ವ್ಯಸ್ತ
ಮುಂಬೈ, ಎ.19: ರಾಷ್ಟ್ರಾದ್ಯಂತ ಲಾಕ್‌ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮನೆಯೊಳಗೆ ಬಂಧಿಯಾಗಿರುವ ಭಾರತದ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಕೆಲವು ಪೈಂಟ್ ಬ್ರಶ್, ವಿಭಿನ್ನ ಬಣ್ಣಗಳಿಂದ ಚಿತ್ರಕಲೆ ಬಿಡಿಸುವುದರಲ್ಲಿ ವ್ಯಸ್ತರಾಗಿದ್ದಾರೆ. ತನ್ನ ಹಳೆಯ ಹವ್ಯಾಸವಾಗಿರುವ ಪೈಂಟಿಂಗ್‌ನ್ನು ಈಗ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
‘‘ಬಾಲ್ಯದಿಂದಲೂ ನನಗೆ ಚಿತ್ರಕಲೆ ಎಂದರೆ ತುಂಬಾ ಇಷ್ಟ. ಇದೀಗ ನನಗೆ ಬಿಡುವು ಲಭಿಸಿದೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವೆ’’ಎಂದು ‘ಸ್ಪೋರ್ಟ್ ಸ್ಟಾರ್’ಗೆ ಕುಲದೀಪ್ ತಿಳಿಸಿದ್ದಾರೆ.
ಪ್ರವಾಸ ಹಾಗೂ ತರಬೇತಿಯ ನಡುವೆ ಕುಲದೀಪ್‌ಗೆ ತನ್ನ ನೆಚ್ಚಿನ ಪೈಂಟಿಂಗ್‌ನತ್ತ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಅನಿರೀಕ್ಷಿತ ವಿರಾಮವು ಅವರಿಗೆ ಅವಕಾಶದ ಕಿಟಿಕಿ ಬಾಗಿಲು ತೆರೆದಿದೆ.
‘‘ನಾವೆಲ್ಲರೂ ಮನೆಯಲ್ಲಿದ್ದೇವೆ. ಪೈಂಟಿಂಗ್ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ನಾನಿದನ್ನು ತುಂಬಾ ಆನಂದಿಸುತ್ತಿದ್ದೇನೆ. ಪೈಂಟಿಂಗ್ ಬಿಡಿಸುವುದಲ್ಲದೆ ನನ್ನ ಕುಟುಂಬ ಸದಸ್ಯರೊಂದಿಗೆ ಅಮೂಲ್ಯ ಸಮಯವನ್ನು ಕಳೆಯುತ್ತಿರುವೆ ಹಾಗೂ ಒಳಾಂಗಣ ತರಬೇತಿಯಲ್ಲಿ ನಿರತನಾಗಿದ್ದೇನೆ. ಈ ದಿನಗಳಲ್ಲಿ ಇದುವೇ ಜೀವನವಾಗಿದೆ’’ ಎಂದು 25ರ ಹರೆಯದ ಯಾದವ್ ಹೇಳಿದ್ದಾರೆ.
ಈ ಸಮಯದಲ್ಲಿ ಸಾಮಾನ್ಯವಾಗಿ ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ವ್ಯಸ್ತರಾಗಿರುತ್ತಾರೆ. ಆದರೆ ಈ ಬಾರಿ ಸಂಪೂರ್ಣ ಭಿನ್ನ. ಕೊರೋನ ವೈರಸ್ ಆರ್ಭಟದಿಂದಾಗಿ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ.
‘‘ಮಾರ್ಚ್-ಮೇ ತಿಂಗಳಲ್ಲಿ ಸಾಮಾನ್ಯವಾಗಿ ನಾವೆಲ್ಲರೂ ಐಪಿಎಲ್ ಆಡುವುದರಲ್ಲಿ ವ್ಯಸ್ತರಾಗಿರುತ್ತೇವೆ. ಆದರೆ, ಈ ಬಾರಿ ಟೂರ್ನಿ ನಡೆಯುತ್ತಿಲ್ಲ. ಇದು ನಿಜವಾಗಿಯೂ ವಿಭಿನ್ನ ಅನುಭವ ನೀಡುತ್ತಿದೆ. ಐಪಿಎಲ್‌ನಲ್ಲಿ ಯಾವಾಗಲೂ ಒತ್ತಡವಿರುತ್ತದೆ. ಈ ಬಾರಿ ನಾವು ಮನೆಯಲ್ಲಿ ಉಳಿದುಕೊಂಡು ನಿರಾಳರಾಗಿದ್ದೇವೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ’’ಎಂದು ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿರುವ ಕುಲದೀಪ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ನಿಕ್ ವೆಬ್ ಅವರು ನೀಡಿರುವ ಮಾರ್ಗಸೂಚಿಯನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ ಎಂದ ಕುಲದೀಪ್,‘‘ನಾವು ತರಬೇತುದಾರರ ಸಂಪರ್ಕದಲ್ಲಿದ್ದೇವೆ. ಅವರ ಸಲಹೆಗಳನ್ನು ಪಾಲಿಸುತ್ತಿದ್ದೇವೆ. ಪ್ರತಿ ವಾರ ಅವರು(ವೆಬ್)ಕಾರ್ಯಕ್ರಮವನ್ನು ಕಳುಹಿಸಿಕೊಡುತ್ತಾರೆ. ಇದು ನಮಗೆ ಸಾಕಷ್ಟು ಲಾಭ ಕೊಡುತ್ತಿದೆ. ನಾವೆಲ್ಲರೂ ಚೆನ್ನಾಗಿ ಸಂವಹನ ನಡೆಸುತ್ತಿದ್ದೇವೆ. ಪ್ರಸ್ತುತ ನಾವೀಗ ಯಾವುದೇ ಪಂದ್ಯಗಳಲ್ಲಿ ಆಡುವ ಕುರಿತಂತೆ ಯೋಚಿಸುತ್ತಿಲ್ಲ. ಸ್ವತಃ ಕಾಳಜಿ ವಹಿಸುವುದು ಮುಖ್ಯ. ಕೋವಿಡ್-19 ವಿರುದ್ಧ ನಾವೆಲ್ಲರೂ ಹೋರಾಡಬೇಕಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಜುಲೈ ಅಥವಾ ಆಗಸ್ಟ್‌ನಲ್ಲಿ ನಾವೆಲ್ಲರೂ ಮತ್ತೆ ಕ್ರಿಕೆಟ್ ಆಡಲು ಆರಂಭಿಸಬಹುದು’’ ಎಂದರು.
2017ರಲ್ಲಿ ಟೀಮ್ ಇಂಡಿಯಾಕ್ಕೆ ಪ್ರವೇಶಿಸಿದ ಬಳಿಕ ಕುಲದೀಪ್ ನ್ಯಾಯೋಚಿತ ಯಶಸ್ಸು ಸಾಧಿಸಿದ್ದಾರೆ. ಈ ತನಕ 6 ಟೆಸ್ಟ್, 60 ಏಕದಿನ ಹಾಗೂ 21 ಟ್ವೆಂಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕುಲದೀಪ್ ಒಟ್ಟು 167 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಆದರೆ, ಕಳೆದ ವರ್ಷ ಕುಲದೀಪ್‌ಗೆ ನಿರಾಶೆಯ ವರ್ಷವಾಗಿತ್ತು. ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಅವರನ್ನು ಐಪಿಎಲ್ ಋತುವಿನ ಮಧ್ಯಭಾಗದಲ್ಲಿ ಆಡುವ 11ರ ಬಳಗದಿಂದ ಹೊರಗಿಡಲಾಗಿತ್ತು. ‘‘ಕಳೆದ ವರ್ಷ ನನ್ನ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ನ್ಯೂಝಿಲ್ಯಾಂಡ್‌ನಿಂದ ವಾಪಸಾದ ಬಳಿಕ ನನ್ನ ಕೋಚ್ ಕಪಿಲ್ ಪಾಂಡೆ ಬಳಿ ತೆರಳಿದ್ದೆ. ನಾವಿಬ್ಬರೂ 20-25 ದಿನಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದೆವು. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ತಯಾರಿ ನಡೆಸಿದ್ದೆ’’ ಎಂದು ಕುಲದೀಪ್‌ಹೇಳಿದ್ದಾರೆ.