ಧೋನಿಗೆ ರೈನಾ ಅಚ್ಚು ಮೆಚ್ಚಿನ ಆಟಗಾರನಾಗಿದ್ದರು: ಯುವರಾಜ್ ಸಿಂಗ್
ಯುವರಾಜ್ ಸಿಂಗ್ ಹೊಸದಿಲ್ಲಿ, ಎ.19: ಪ್ರತಿಯೊಬ್ಬ ನಾಯಕನಲ್ಲೂ ನೆಚ್ಚಿನ ಆಟಗಾರರು ಇರುತ್ತಾರೆ. ಇದು ಸರ್ವೇ ಸಾಮಾನ್ಯ. ಮಹೇಂದ್ರ ಸಿಂಗ್ ಧೋನಿ ವಿಚಾರಕ್ಕೆ ಬಂದರೆ ಅವರಿಗೆ ಸುರೇಶ್ ರೈನಾ ಎಂದರೆ ಅಚ್ಚುಮೆಚ್ಚು. ಭಾರತದ ಮಾಜಿ ನಾಯಕ ಧೋನಿ ಅವರು ರೈನಾರನ್ನು ಹೆಚ್ಚು ಬೆಂಬಲಿಸುತ್ತಿದ್ದರು ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
2011ರ ವಿಶ್ವಕಪ್ ವೇಳೆ ಆಡುವ 11ರ ಬಳಗ ದಲ್ಲಿ ಯೂಸುಫ್ ಪಠಾಣ್ ಹಾಗೂ ರೈನಾರನ್ನು ಆಯ್ಕೆ ಮಾಡುವಾಗ ಧೋನಿಗೆ ಎದುರಾಗಿದ್ದ ಗೊಂದಲವನ್ನು ಯುವರಾಜ್ ನೆನಪಿಸಿಕೊಂಡರು.
‘‘ಸುರೇಶ್ ರೈನಾಗೆ ಆಗ ಭಾರೀ ಬೆಂಬಲವಿತ್ತು. ಏಕೆಂದರೆ ಎಂಎಸ್ ಅವರ ಬೆನ್ನಿಗೆ ನಿಂತಿದ್ದರು. ಪ್ರತಿಯೊಬ್ಬ ನಾಯಕನಲ್ಲೂ ನೆಚ್ಚಿ ನ ಆಟಗಾರ ಇರುತ್ತಾನೆ. ಆ ಸಮಯದಲ್ಲಿ ಮಾಹಿ ಅವರು ರೈನಾರ ಬೆಂಬಲಕ್ಕೆ ನಿಂತಿದ್ದರು’’ ಎಂದರು.
‘‘ಆ ಸಮಯದಲ್ಲಿ ಯೂಸುಫ್ ಪಠಾಣ್ ಚೆನ್ನಾಗಿ ಆಡುತ್ತಿದ್ದರು. ನಾನು ಕೂಡ ಉತ್ತಮವಾಗಿ ಆಡುವ ಜೊತೆಗೆ ವಿಕೆಟ್ ಪಡೆಯುತ್ತಿದ್ದೆ. ಆಗ ರೈನಾ ಉತ್ತಮ ಟಚ್‌ನಲ್ಲಿರಲಿಲ್ಲ. ಆಗ ಭಾರತ ತಂಡದಲ್ಲಿ ಎಡಗೈ ಸ್ಪಿನ್ನರ್ ಇರಲಿಲ್ಲ. ನಾನು ವಿಕೆಟ್ ಪಡೆಯುತ್ತಿದ್ದೆ. ಹೀಗಾಗಿ ಅವರಿಗೆ ಬೇರೆ ಆಯ್ಕೆ ಇರಲಿಲ್ಲ’’ ಎಂದರು ಯುವಿ ಹೇಳಿದರು.