×
Ad

ಫ್ಯಾಕ್ಟ್ ಚೆಕ್: ಕೊರೋನ ಹರಡಲು ಮುಸ್ಲಿಮರು ನೋಟುಗಳನ್ನು ಎಸೆಯುತ್ತಿದ್ದಾರೆ ಎನ್ನುವ ವಿಡಿಯೋ ಸುಳ್ಳು

Update: 2020-04-20 17:40 IST

ರಸ್ತೆಯಲ್ಲಿ ಬಿದ್ದಿರುವ ನೋಟುಗಳನ್ನು ಪೊಲೀಸರು ಕೋಲುಗಳ ಮೂಲಕ ಹೆಕ್ಕಿ ಚೀಲವೊಂದಕ್ಕೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಕೊರೋನ ವೈರಸ್ ಹರಡಲು ಮುಸ್ಲಿಮರು ಎಸಗಿರುವ ಕೃತ್ಯ ಎಂದು ಆರೋಪಿಸಲಾಗುತ್ತಿದೆ.

“ಕೊರೋನವೈರಸ್ ಹರಡಲು ಅವರು ಹೊಸ ದಾರಿ ಕಂಡುಕೊಂಡಿದ್ದಾರೆ. ಮುಸ್ಲಿಂ ವ್ಯಕ್ತಿಯೊಬ್ಬ 100, 200 ಮತ್ತು 500 ರೂ.ಗಳ ನೋಟುಗಳನ್ನು ರಸ್ತೆಗೆ ಎಸೆದು , ಅದನ್ನು ಹೆಕ್ಕುವವರಿಗೆ ಕೊರೋನ ಹರಡುವಂತೆ ಮಾಡುವುದನ್ನು ಈ ಪ್ರದೇಶದ ವ್ಯಕ್ತಿಯೊಬ್ಬರು ನೋಡಿದ್ದಾರೆ. ಪೊಲೀಸರನ್ನು ಕರೆಯಲಾಗಿದೆ ಮತ್ತು ಅದನ್ನು ಪೊಲೀಸರು ಹೆಕ್ಕಿದ್ದಾರೆ” ಎಂದು  @SortedEagle ಟ್ವಿಟರ್ ಹ್ಯಾಂಡಲ್ ಮಾಡಿದ್ದ ಟ್ವೀಟ್ 1,200 ಬಾರಿ ರಿಟ್ವೀಟ್ ಆಗಿದೆ.

ಇದೇ ರೀತಿಯ ಆರೋಪಗಳ ಜೊತೆ ಫೇಸ್ಬುಕ್ ನಲ್ಲೂ ಈ ವಿಡಿಯೋ ವೈರಲ್ ಆಗಿದೆ.

ವಾಸ್ತವವೇನು?

ಈ ಬಗ್ಗೆ altnews.in ಫ್ಯಾಕ್ಟ್ ಚೆಕ್ ನಡೆಸಿದ್ದು, ಘಟನೆ ಇಂದೋರ್ ನ ಖಾತಿಪುರ-ಗೋರಿ ನಗರ್ ರಸ್ತೆಯಲ್ಲಿ ನಡೆದಿತ್ತು ಎನ್ನುವುದು ದೃಢಪಟ್ಟಿದೆ. ಈ ಬಗ್ಗೆ ಹಿರಾ ನಗರ್ ಪೊಲೀಸ್ ಠಾಣೆಯನ್ನು altnews.in ಸಂಪರ್ಕಿಸಿದ್ದು, ಅಧಿಕಾರಿ ರಾಜೀವ್ ಭದುರಿಯಾ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಯಾವುದೇ ವ್ಯಕ್ತಿ ಅಥವಾ ಮುಸ್ಲಿಂ ಈ ನೋಟುಗಳನ್ನು ಎಸೆದಿಲ್ಲ ಎನ್ನುವುದು ಸ್ಪಷ್ಟಗೊಂಡಿದೆ. ಇಂಡೇನ್ ಗ್ಯಾಸ್ ಡೆಲಿವರಿ ಬಾಯ್ ಒಬ್ಬನ ಜೇಬಿನಿಂದ ಈ ನೋಟುಗಳು ಬಿದ್ದಿತ್ತು. ಈ ಡೆಲಿವರಿ ಬಾಯ್ ಹೆಸರು ನರೇಂದ್ರ ಯಾದವ್ ಮತ್ತು ಈತ ಇಲ್ಲಿನ ಗೌರಿ ನಗರ್ ನಿವಾಸಿ. ನಾವು ಈ ಬಗ್ಗೆ ಸಿಸಿಟಿವಿ ಪರೀಕ್ಷಿಸಿದ್ದು, ಇದು ಆತನ ಜೇಬಿನಿಂದ ಬಿದ್ದ ನೋಟುಗಳು ಎನ್ನುವುದು ಖಚಿತಗೊಂಡಿದೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News