×
Ad

ಕೊರೋನ ರೋಗಿಗಳಿಗೆ ಚಿಕಿತ್ಸೆ: ಮೈಸೂರು ಮೂಲದ ವೈದ್ಯೆಗೆ ವಿಶೇಷ ಗೌರವ ಸಲ್ಲಿಸಿದ ಅಮೆರಿಕನ್ನರು

Update: 2020-04-21 14:39 IST

ನ್ಯೂಯಾರ್ಕ್: ಅಮೆರಿಕಾದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರು ಮೂಲದ ವೈದ್ಯೆ ಡಾ. ಉಮಾ ಮಧುಸೂದನ್ ಅವರಿಗೆ ಸ್ಥಳೀಯ ನಿವಾಸಿಗಳು ಇತ್ತೀಚೆಗೆ ಅತ್ಯಂತ ಹೃದಯಸ್ಪರ್ಶಿ ‘ಡ್ರೈವ್ ಆಫ್ ಆನರ್’ ನೀಡಿ ಅವರು ಸಲ್ಲಿಸುತ್ತಿರುವ ಸೇವೆಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತಾದ ವೀಡಿಯೋ ಒಂದು ಕೂಡ  ಹರಿದಾಡುತ್ತಿದೆ.

ವೀಡಿಯೋದಲ್ಲಿ ಹಲವಾರು ಪೊಲೀಸ್ ವಾಹನಗಳು, ಫೈರ್ ಬ್ರಿಗೇಡ್ ಟ್ರಕ್ ‍ಗಳು ಹಾಗೂ ಖಾಸಗಿ ವಾಹನಗಳು ಉಮಾ ಮನೆಯ ಸುತ್ತಲಿನ ಪ್ರದೇಶದಲ್ಲಿ ಸೈರನ್ ಹಾಗೂ ಹಾರ್ನ್ ಬಾರಿಸುತ್ತಾ ಸಾಗಿ ತಮ್ಮ ಮನೆಯೆದುರು ನಿಂತು ಕೈಬೀಸುತ್ತಿರುವ ಆಕೆಯ ಎದುರು ಸ್ವಲ್ಪ ಹೊತ್ತು ವಾಹನ ನಿಲ್ಲಿಸಿ ಧನ್ಯವಾದ ಸಲ್ಲಿಸುತ್ತಿರುವುದು ಕಾಣಿಸುತ್ತದೆ.

ಈ ಡ್ರೈವ್ ಆಫ್ ಹಾನರ್ ನಲ್ಲಿ ಸ್ಥಳೀಯ ಆಡಳಿತ ಕೂಡ ಸಾಥ್ ನೀಡಿತ್ತು. ಹೀಗಾಗಿ ಇಲ್ಲಿನ ಪೊಲೀಸರು, ಅಧಿಕಾರಿಗಳು, ಸರ್ಕಾರಿ ವಾಹನಗಳು, ಅಗ್ನಿಶಾಮಕ ಸಿಬ್ಬಂದಿ, ಭದ್ರತಾ ಸಿಬ್ಬಂದಿಗಳು ಸೇರಿ ಉಮಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಡಾ.ಉಮಾರಾಣಿ ಮಧುಸೂದನ್ ಅವರು ಮೈಸೂರಿನ ಜೆಎಸ್‍ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 1997ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ. ಅಮೆರಿಕಾದಲ್ಲಿ ವಾಸವಾಗಿರುವ ಡಾ. ಉಮಾ ಮಧುಸೂದನ್ ಅವರು ಅಮೆರಿಕದ ಸೌತ್ ವಿಂಡ್ಸರ್‍ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. 

ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಡಾ.ಉಮಾ ಅವರ ಸೇವೆಯನ್ನು ಪ್ರಶಂಸಿಸಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News