×
Ad

ಕೊರೋನ ಬಿಕ್ಕಟ್ಟಿನ ನಡುವೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Update: 2020-04-21 18:05 IST

ಕೋವಿಡ್ – 19 ಮಹಾಮಾರಿ ವಿಶ್ವಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ. ಈ ಹಿಂದೆಂದೂ ಕಂಡಿರದ ಬಿಕ್ಕಟ್ಟಿನಿಂದಾಗಿ ಸಾಮಾನ್ಯ ಜನರಲ್ಲಿ ಇದು ಮಾನಸಿಕ ಒತ್ತಡವನ್ನೂ ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನಸಾಮಾನ್ಯರು ಈ ಕೆಲವು ಅತ್ಯಗತ್ಯ ವಿಷಯಗಳನ್ನು ತಿಳಿದಿರಬೇಕು.

► ಈ ಸಾಂಕ್ರಾಮಿಕವು ಯಾವುದೇ ಜನಾಂಗ ಅಥವಾ ಜಾತಿ, ಧರ್ಮಗಳಿಗೆ ಸೀಮಿತವಾಗಿಲ್ಲ. ಆದುದರಿಂದ ಕೋವಿಡ್-19ಗೆ ಬಲಿಯಾದದವರ ಕುಟುಂಬಸ್ಥರು, ಸೋಂಕಿತರು ಯಾವುದೇ ಅಪರಾಧಿ ಭಾವನೆಯಿಂದ ಬಳಲುವ ಅವಶ್ಯಕತೆಯಿಲ್ಲ. ಇದನ್ನು ಕೇವಲ ಒಂದು ವೈರಾಣುವಿನ ಸೋಂಕು ಎಂದು ಪರಿಗಣಿಸುವುದು ಅವಶ್ಯಕ.

► ಕೋವಿಡ್-19 ಸೋಂಕಿತ ವ್ಯಕ್ತಿಯನ್ನು ಮಾನಸಿಕವಾಗಿ ದುರ್ಬಲಗೊಳಿಸಬಾರದು. ಕೋವಿಡ್-19 ಸೋಂಕು ಗುಣಪಡಿಸಬಹುದಾದಂತಹ ಕಾಯಿಲೆಯಾಗಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾಗಿದೆ.

► ಯಾವುದೇ ಆಧಾರವಿಲ್ಲದೆ ಪ್ರಸಾರವಾಗುವ ಮಾಹಿತಿಗಳನ್ನು ಓದುವುದು, ವೀಕ್ಷಿಸುವುದನ್ನು ಕಡಿಮೆ ಮಾಡಬೇಕಾಗಿದೆ. ಇಂತಹ ಮಾಹಿತಿಗಳು ವ್ಯಕ್ತಿಯ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

►  ಆರೋಗ್ಯ ಕಾರ್ಯಕರ್ತರು ತಮ್ಮ ಸಂಸಾರ, ಸ್ನೇಹಿತರು, ಬಂಧು ಬಾಂಧವರಿಂದ ದೂರ ಉಳಿಯುವ ಸಂದರ್ಭ ಎದುರಾಗಿರುವುದರಿಂದ ಮಾನಸಿಕ ಒತ್ತಡದಲ್ಲಿದ್ದಾರೆ. ಅಂತಹವರು ಡಿಜಿಟಲ್ ವಿಧಾನಗಳನ್ನು ಬಳಸಿ ತಮ್ಮವರ ಜೊತೆ ಸಂಪರ್ಕ ಸಾಧಿಸಬಹುದು. ಇದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗಬಹುದು.

► ಸಾಮಾಜಿಕ ಕಾರ್ಯಕರ್ತರು, ದಾದಿಯರು, ಆಶಾ ಕಾರ್ಯಕರ್ತೆಯರು, ಆ್ಯಂಬುಲೆನ್ಸ್ ಸಿಬ್ಬಂದಿ, ತರಬೇತಿ ಪಡೆದ ಸಿಬ್ಬಂದಿ ವರ್ಗದವರು ಸಾಮಾನ್ಯ ಜನರಿಗೆ ಸಾಮಾನ್ಯ ಮಾಹಿತಿಯೊಂದಿಗೆ, ನೈತಿಕ ಬೆಂಬಲವನ್ನು ನೀಡಬೇಕಾಗುತ್ತದೆ.

►  ದೀರ್ಘಕಾಲದ ಮಾನಸಿಕ ತೊಂದರೆಯಿಂದ ಬಳಲುತ್ತಿರುವವರ ಔಷಧೋಪಚಾರಗಳ ಬಗ್ಗೆ ನಿಗಾ ವಹಿಸಬೇಕಾಗುತ್ತದೆ.

ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡುವ ಬಗ್ಗೆ

► ಕೆಲವೊಮ್ಮೆ ಅನೇಕ ಕಾರಣಗಳಿಂದ ಮಕ್ಕಳು ಹೆತ್ತವರಿಂದ ದೂರವಿರುವ ಪರಿಸ್ಥಿತಿ ಒದಗಬಹುದು. ಅಂತಹ ಮಕ್ಕಳಿಗೆ ಕೋವಿಡ್ 19 ಬಿಕ್ಕಟ್ಟಿನ ಸಮಯದಲ್ಲಿ ಇತರರ ಭಾವನಾತ್ಮಕ ಬೆಂಬಲ ಅತ್ಯಗತ್ಯ.

► ಮಕ್ಕಳು ಮನೆಯಲ್ಲಿನ ದೊಡ್ಡವರನ್ನು ಅನುಕರಿಸುವವರಾಗಿರುತ್ತಾರೆ. ಆದುದರಿಂದ ಮನೆಯಲ್ಲಿನ ಹಿರಿಯರು, ತಂದೆ ತಾಯಿಯರು, ಮಕ್ಕಳು ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು.

ಹಿರಿಯರು ಹಾಗೂ ವೃದ್ಧರು

► ಹಿರಿಯ ಜೀವಗಳು, ಮರೆವಿನ ಕಾಯಿಲೆಗಳನ್ನು ಹೊಂದಿರುವವರು, ಒತ್ತಡದಲ್ಲಿರುವವರು, ಮೂಲೆ ಗುಂಪಾಗಿರುವವರು, ಮಕ್ಕಳುಗಳಿಂದ ದೂರವಾಗಿರುವವರು, ವಿದೇಶದಲ್ಲಿ ಮಕ್ಕಳನ್ನು ಹೊಂದಿರುವ ವೃದ್ಧರು ಇಂತಹವರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿದ್ದು, ಭಾವನಾತ್ಮಕ ಹಾಗೂ ನೈತಿಕ ಬೆಂಬಲದ ಅಗತ್ಯ.

► ಇವರಿಗೆ ಅಗತ್ಯ ವಸ್ತುಗಳ ಪೂರೈಕೆ, ಔಷಧೋಪಚಾರಗಳ ಅವಶ್ಯಕತೆ ಇದೆ.

ಐಸೊಲೇಶನ್ ನಲ್ಲಿ ಇರುವವರಿಗಾಗಿ

► ಐಸೊಲೇಶನ್ ನಲ್ಲಿ ಇರುವುದು ಸಮಾಜದ ಒಳಿತಿಗಾಗಿ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಪ್ರತ್ಯೇಕಗೊಳ್ಳುವುದು ತಮ್ಮ ಆಪ್ತರು, ಹತ್ತಿರದವರು ಹಾಗೂ ಸಮಾಜದ ಒಳಿತಿಗಾಗಿ ನೀಡುತ್ತಿರುವ ಕೊಡುಗೆ ಎಂದು ಭಾವಿಸಬೇಕು.

► ಆಪ್ತರೊಂದಿಗೆ ಡಿಜಿಟಲ್ ಮಾಧ್ಯಮದೊಂದಿಗೆ ಸಂಪರ್ಕ ಇಟ್ಟುಕೊಳ್ಳಬಹುದಾಗಿದೆ.

► ಮಾನಸಿಕ ಒತ್ತಡದ ಸಮಯದಲ್ಲಿ ಮನಸ್ಸಿಗೆ ಆಹ್ಲಾದ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

►  ಅನಾವಶ್ಯಕ ಆಧಾರ ರಹಿತ ಸುದ್ದಿಗಳಿಂದ ದೂರವಿರಿ.

► ತಮ್ಮ ಬೇಜವಾಬ್ದಾರಿತನವು ಇತರರನ್ನು ಸಂಕಷ್ಟಕ್ಕೆ ಎಡೆಮಾಡಬಹುದು ಎಂಬುದನ್ನು ಮನಗಂಡು ಜವಾಬ್ದಾರಿಯಿಂದ ವರ್ತಿಸಬೇಕು

ಡಾ. ಸ್ಮಿತಾ ಜೆ.ಡಿ.

-ತಜ್ಞ ವೈದ್ಯರು, ಗುಂಡ್ಲುಪೇಟೆ

Writer - ಡಾ. ಸ್ಮಿತಾ ಜೆ.ಡಿ.

contributor

Editor - ಡಾ. ಸ್ಮಿತಾ ಜೆ.ಡಿ.

contributor

Similar News