ಪಾಕಿಸ್ತಾನದ ಉಗ್ರ ನಿಗಾ ಪಟ್ಟಿಯಿಂದ 1,800 ಉಗ್ರರು ಹೊರಗೆ: ಮುಂಬೈ ಉಗ್ರ ದಾಳಿಯ ರೂವಾರಿಯ ಹೆಸರೂ ನಾಪತ್ತೆ
ನ್ಯೂಯಾರ್ಕ್, ಎ. 21: ಭಯೋತ್ಪಾದನೆಗೆ ಪೂರೈಕೆಯಾಗುವ ಹಣದ ಮೇಲೆ ನಿಗಾ ಇಡುವ ಕಾವಲು ಸಂಸ್ಥೆ ಎಫ್‌ಎಟಿಎಫ್‌ನ ಇನ್ನೊಂದು ಸುತ್ತಿನ ವಿಶ್ಲೇಷಣೆಗೆ ಮುನ್ನ, ಪಾಕಿಸ್ತಾನವು ಸದ್ದಿಲ್ಲದೆ ಸುಮಾರು 1,800 ಭಯೋತ್ಪಾದಕರನ್ನು ತನ್ನ ನಿಗಾ ಪಟ್ಟಿಯಿಂದ ತೆಗೆದುಹಾಕಿದೆ.
ನಿಗಾ ಪಟ್ಟಿಯಿಂದ ಹೊರಬಿದ್ದವರಲ್ಲಿ 2008ರ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಾಗೂ ಲಷ್ಕರೆ ತಯ್ಯಬ ಭಯೋತ್ಪಾದಕ ಗುಂಪಿನ ಆಪರೇಶನ್ಸ್ ಕಮಾಂಡರ್ ಝಕಿವುರ್ರಹ್ಮಾನ್ ಲಾಖ್ವಿ ಕೂಡ ಸೇರಿದ್ದಾನೆ.
ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರ (ಎನ್‌ಎಸಿಟಿಎ)ವು ನಿರ್ವಹಿಸಿಕೊಂಡು ಬರುತ್ತಿರುವ ಈ ಭಯೋತ್ಪಾದಕರ ಪಟ್ಟಿಯನ್ನು, ಶಂಕಿತ ಭಯೋತ್ಪಾದಕರ ಜೊತೆ ವ್ಯವಹರಿಸುವುದರಿಂದ ಅಥವಾ ಅವರಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವುದರಿಂದ ದೂರವಿರಲು ಹಣಕಾಸು ಸಂಸ್ಥೆಗಳು ಬಳಸಿಕೊಳ್ಳುತ್ತಿವೆ.
2018ರಲ್ಲಿ ಈ ಪಟ್ಟಿಯಲ್ಲಿ ಸುಮಾರು 7,600 ಹೆಸರುಗಳಿದ್ದವು. ಕಳೆದ 18 ತಿಂಗಳುಗಳ ಅವಧಿಯಲ್ಲಿ ಪಟ್ಟಿಯಲ್ಲಿನ ಹೆಸರುಗಳು 3,800ಕ್ಕೂ ಕೆಳಗೆ ಇಳಿದಿವೆ ಎಂದು ನ್ಯೂಯಾರ್ಕ್‌ನಲ್ಲಿರುವ ನಿಯಂತ್ರಣ ತಂತ್ರಜ್ಞಾನ ಕಂಪೆನಿ ‘ಕ್ಯಾಸ್ಟಲಮ್.ಎಐ’ ತಿಳಿಸಿದೆ.
ಮಾರ್ಚ್ ಆರಂಭದಿಂದ ಸುಮಾರು 1,800 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಕ್ಯಾಸ್ಟಲಮ್ ಸಂಗ್ರಹಿಸಿದ ಅಂಕಿಅಂಶಗಳು ಹೇಳುತ್ತವೆ.
ಪ್ಯಾರಿಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನೊಂದಿಗೆ ಸಮಾಲೋಚಿಸಿ ಮಾಡಿಕೊಂಡಿರುವ ಕ್ರಿಯಾ ಯೋಜನೆಯೊಂದನ್ನು ಜಾರಿಗೊಳಿಸುವ ಪ್ರಯತ್ನದಲ್ಲಿ ಪಾಕಿಸ್ತಾನ ತೊಡಗಿದೆ. ಭಯೋತ್ಪಾದಕರ ವಿರುದ್ಧದ ಆರ್ಥಿಕ ದಿಗ್ಬಂಧನಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಕ್ರಿಯಾ ಯೋಜನೆಯ ಒಂದು ಭಾಗವಾಗಿದೆ.
ಎಫ್‌ಎಟಿಎಫ್ ಕಣ್ಣಿಗೆ ಮಣ್ಣೆರಚುವ ತಂತ್ರವೇ?
ನಿಗಾ ಪಟ್ಟಿಯಿಂದ ಭಯೋತ್ಪಾದಕರನ್ನು ಹೊರಗಿಡುವುದು, ಎಫ್‌ಎಟಿಎಫ್‌ನ ಶಿಫಾರಸುಗಳನ್ನು ಜಾರಿಗೊಳಿಸಲು ಪಾಕಿಸ್ತಾನ ರೂಪಿಸಿರುವ ಕ್ರಿಯಾ ಯೋಜನೆಯ ಒಂದು ಭಾಗವಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ, ಕ್ರಮ ತೆಗೆದುಕೊಳ್ಳಬೇಕಾದ 27 ವಿಷಯಗಳ ಪೈಕಿ 14ರಲ್ಲಿ ಮಾತ್ರ ಪಾಕಿಸ್ತಾನ ಕ್ರಮ ತೆಗೆದುಕೊಂಡಿದೆ ಎಂದು ಎಫ್‌ಎಟಿಎಫ್ ಅಭಿಪ್ರಾಯಪಟ್ಟಿತ್ತು. ಉಳಿದ ವಿಷಯಗಳ ಅನುಷ್ಠಾನವು ವಿವಿಧ ಹಂತಗಳಲ್ಲಿದೆ ಎಂದಿತ್ತು.
ಈ ವಿಷಯಗಳಲ್ಲಿ ಪಾಕಿಸ್ತಾನದ ಪ್ರಗತಿಯನ್ನು ವಿಶ್ಲೇಷಿಸಲು ಎಫ್‌ಎಟಿಎಫ್ ಇನ್ನು ಮೇ ತಿಂಗಳಲ್ಲಿ ಸಭೆ ಸೇರಲಿದೆ.