×
Ad

ಸೌದಿಯಿಂದ ಕಚ್ಚಾತೈಲ ಆಮದು ನಿಲ್ಲಿಸಲು ಚಿಂತನೆ: ಟ್ರಂಪ್

Update: 2020-04-21 22:15 IST

ವಾಶಿಂಗ್ಟನ್, ಎ. 21: ಸ್ವದೇಶದಲ್ಲಿ ಸಂಕಷ್ಟದಲ್ಲಿರುವ ತೈಲ ಉದ್ಯಮಕ್ಕೆ ಬೆಂಬಲ ನೀಡುವ ಕ್ರಮವಾಗಿ, ಸೌದಿ ಅರೇಬಿಯದಿಂದ ಬರುತ್ತಿರುವ ಕಚ್ಚಾತೈಲ ಸರಕನ್ನು ನಿಲ್ಲಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಸೌದಿ ಅರೇಬಿಯದಿಂದ ಬರುತ್ತಿರುವ ತೈಲ ಸರಕನ್ನು ನಿಲ್ಲಿಸುವಂತೆ ಕೆಲವು ರಿಪಬ್ಲಿಕನ್ ಸಂಸದರು ಮಾಡಿಕೊಂಡಿರುವ ಮನವಿಯ ಬಗ್ಗೆ ಟ್ರಂಪ್‌ರ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ಸರಿ, ನಾನು ಆ ಬಗ್ಗೆ ಪರಿಶೀಲಿಸುತ್ತೇನೆ’’ ಎಂದರು.

‘‘ಪತ್ರಿಕಾಗೋಷ್ಠಿ ಆರಂಭಗೊಳ್ಳುವುದಕ್ಕೆ ಮೊದಲಷ್ಟೇ ನಾನು ಈ ಬಗ್ಗೆ ಕೇಳಿದೆ. ನಮ್ಮಲ್ಲಿ ಖಂಡಿತವಾಗಿಯೂ ಸಾಕಷ್ಟು ಪ್ರಮಾಣದಲ್ಲಿ ತೈಲ ದಾಸ್ತಾನಿದೆ. ಹಾಗಾಗಿ, ಈ ಮನವಿಯನ್ನು ನಾನು ಪರಿಶೀಲಿಸುತ್ತೇನೆ’’ ಎಂದು ಟ್ರಂಪ್ ನುಡಿದರು.

ಜಾಗತಿಕ ಮಟ್ಟದಲ್ಲಿ ಬೀಗಮುದ್ರೆ ಜಾರಿಯಲ್ಲಿದ್ದು ತೈಲ ಬೇಡಿಕೆ ಪಾತಾಳಕ್ಕೆ ಕುಸಿದ ಹಿನ್ನೆಲೆಯಲ್ಲಿ, ಇತಿಹಾಸದಲ್ಲೇ ಮೊದಲ ಬಾರಿಗೆ, ಸೋಮವಾರ ಅಮೆರಿಕದ ಕಚ್ಚಾತೈಲ ಮಾರುಕಟ್ಟೆಗಳು ಸ್ವತಃ ತಾವೇ ಹಣಕೊಟ್ಟು ತಮ್ಮ ತೈಲ ಸರಕು ಖಾಲಿ ಮಾಡಲು ಪ್ರಯತ್ನಿಸಿವೆ. ತೈಲ ಸಂಗ್ರಹಾಗಾರಗಳಲ್ಲಿ ಸ್ಥಳವಿಲ್ಲದೇ ಇರುವುದರಿಂದ ಕೆಲವು ವ್ಯಾಪಾರಿಗಳು ಬ್ಯಾರಲ್‌ಗೆ 37.63 ಡಾಲರ್ ಹಣವನ್ನು ಸ್ವತಃ ತಾವೇ ಪಾವತಿಸಿ ತಮ್ಮ ಸರಕನ್ನು ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News