ಆಕ್ಷೇಪಾರ್ಹ ಪೋಸ್ಟ್ ಆರೋಪ: ಜಮ್ಮು ಕಾಶ್ಮೀರದ ಮತ್ತೊಬ್ಬ ಪತ್ರಕರ್ತನ ವಿರುದ್ಧ ಎಫ್‌ಐಆರ್

Update: 2020-04-22 18:42 GMT

 ಶ್ರೀನಗರ, ಎ.22: ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡಿರುವ ಆರೋಪದಲ್ಲಿ ಮತ್ತೊಬ್ಬ ಪತ್ರಕರ್ತನ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆಯಡಿ ಪತ್ರಕರ್ತ ಮತ್ತು ಲೇಖಕ ಗೌಹರ್ ಗೀಲಾನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು , ಇದು ಕಳೆದ 48 ಗಂಟೆಗಳಲ್ಲಿ ಕಾಶ್ಮೀರ ಮೂಲದ ಪತ್ರಕರ್ತರ ವಿರುದ್ಧ ದಾಖಲಾಗಿರುವ 3ನೇ ಪ್ರಕರಣವಾಗಿದೆ.

   ಗೀಲಾನಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬರಹ ಮತ್ತು ಪೋಸ್ಟ್‌ಗಳಿಂದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ದೇಶದ ಭದ್ರತೆಗೆ ಹಾನಿಕಾರಕವಾಗುವಂತಹ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸೈಬರ್ ವಿಭಾಗದ ಹೇಳಿಕೆ ತಿಳಿಸಿದೆ.

ಕಾಶ್ಮೀರ ಕಣಿವೆಯಲ್ಲಿನ ಭಯೋತ್ಪಾದಕ ಕೃತ್ಯವನ್ನು ವೈಭವೀಕರಿಸಿರುವುದು, ಜನರ ಮನಸ್ಸಿನಲ್ಲಿ ದೇಶದ ವಿರುದ್ಧ ಅಸಮಾಧಾನ , ಭೀತಿ ಹುಟ್ಟಿಸುವ ಮೂಲಕ ಸಾರ್ವಜನಿಕರ ನೆಮ್ಮದಿ ಕೆಡಿಸುವ ಮತ್ತು ರಾಜ್ಯದ ಭದ್ರತೆಗೆ ಅಪಾಯ ತರುವಂತಹ ಕೃತ್ಯ ಎಸಗಲು ಪ್ರೇರೇಪಿಸುತ್ತಿರುವ ಬಗ್ಗೆ ಗೀಲಾನಿ ವಿರುದ್ಧ ಹಲವು ದೂರುಗಳು ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಇದಕ್ಕೂ ಮುನ್ನ, ಪತ್ರಕರ್ತರಾದ ಪೀರ್ ಝಾದ್ ಆಶಿಖ್ ಮತ್ತು ಮಸ್ರತ್ ಝಹರಾ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿತ್ತು.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಯ ಬಳಿಕ ಹಲವು ಪತ್ರಕರ್ತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು ರಾಜ್ಯದಲ್ಲಿ ಮಾಧ್ಯಮ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತಿದೆ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಈ ಮಧ್ಯೆ, ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಇದು ಅಧಿಕಾರದ ದುರುಪಯೋಗವಾಗಿದೆ ಎಂದು ತಿಳಿಸಿದ್ದು ಪತ್ರಕರ್ತರ ವಿರುದ್ಧದ ಪ್ರಕರಣವನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದೆ.

  ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ರಕರ್ತರನ್ನು ಬೆದರಿಸುವ ಕೃತ್ಯ ಕೊನೆಗೊಳಿಸುವಂತೆ ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಕೂಡಾ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News