ವಿಶ್ವವನ್ನು ಪೀಡಿಸಿದ ಕೊರೋನ ಬಗ್ಗೆ ಇವರಿಗೆ ಗೊತ್ತೇ ಇಲ್ಲ..!

Update: 2020-04-23 12:00 GMT

ಇಟಲಿ : ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿದ ಕೊರೋನ ಸಾಂಕ್ರಾಮಿಕದ ಬಗ್ಗೆ ಈ ಪ್ರಚಾರ ಯುಗದಲ್ಲೂ ಮಾಹಿತಿಯೇ ಇಲ್ಲ ಎಂದರೆ ನೀವು ನಂಬುತ್ತೀರಾ ? 2017ರಲ್ಲಿ ಉದ್ಯೋಗ ತೊರೆದು ಬೋಟು ಖರೀದಿಸಿ ವಿಶ್ವ ಪರ್ಯಟನೆಗೆ ಹೊರಟಿದ್ದ ಈ ದಂಪತಿಗೆ ಕೆರೀಬಿಯನ್ ದ್ವೀಪದಲ್ಲಿ ಇವರ ಬೋಟು ತಡೆದು ನಿಲ್ಲಿಸುವವರೆಗೆ ಕೊರೋನ ಬಗ್ಗೆ ಏನೂ ತಿಳಿದಿರಲಿಲ್ಲ.

ಇಟಲಿಯ ಲೊಂಬಾರ್ಡಿಯ ಎಲೆನಾ ಮನಿಘೆಟ್ಟಿ ಹಾಗೂ ಮ್ಯಾಂಚೆಸ್ಟರ್‌ನ ರಿಯಾನ್ ಒಸ್ಬೋರ್ನ್ ಅವರು ಕಳೆದ ಫೆಬ್ರುವರಿಯಲ್ಲಿ ಕೆನರಿ ದ್ವೀಪದಿಂದ ಹೊರಟು ಸೆಂಟ್ ವಿನ್ಸೆಂಟ್ ವರೆಗೆ 3000 ಕಿಲೋ ಮೀಟರ್ ಜಲಯಾನಕ್ಕೆ ಹೊರಟಿದ್ದರು. ಹೊರಡುವ ಮುನ್ನ, ವಿಹಾರದ ಖುಷಿಯಲ್ಲಿರುವಾಗ ಯಾವ ಕೆಟ್ಟ ಸುದ್ದಿಯನ್ನೂ ಹೇಳದಂತೆ ಕುಟುಂಬದವರಿಗೆ ಮನವಿ ಮಾಡಿದ್ದರು.

ಆದರೆ ಕೆರೀಬಿಯನ್ ದ್ವೀಪ ತಲುಪಿದಾಗ, ಕೋವಿಡ್-19ನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಹಲವು ದ್ವೀಪಗಳು ತಮ್ಮ ಗಡಿಯನ್ನು ಮುಚ್ಚಿರುವುದು ಇವರ ಗಮನಕ್ಕೆ ಬಂತು. ಫೆಬ್ರುವರಿಯಲ್ಲಿ ಯಾತ್ರೆ ಹೊರಟಾಗ ಚೀನಾದಲ್ಲಿ ವೈರಸ್ ಸೋಂಕು ಇರುವುದು ತಿಳಿದಿತ್ತು. ಆದರೆ ವಿಶ್ವದ ಈ ಭಾಗಕ್ಕೆ ಅದು ಹರಡುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ವಿವರಿಸಿದರು.

25 ದಿನ ಸಮುದ್ರಯಾನದಲ್ಲಿ ಮೊಬೈಲ್ ಸಂದೇಶವೂ ಇಲ್ಲದ ಕಾರಣ ಹೊರಜಗತ್ತಿನ ಸಂಪರ್ಕವೇ ಇರಲಿಲ್ಲ. ಲಾಕ್‌ಡೌನ್ ನಿರ್ಬಂಧದಿಂದಾಗಿ ಹಲವು ಕಡೆಗಳಲ್ಲಿ ಬೋಟ್ ನಿಲುಗಡೆಗೆ ಅವಕಾಶ ನೀಡದಿದ್ದಾಗ ಸಾಂಕ್ರಾಮಿಕದ ಬಗ್ಗೆ ತಿಳಿಯಿತು. ಇಂಥದ್ದೇ ಜಲಯಾನ ಕೈಗೊಂಡು ಇವರಿಂದ ಮುಂದೆ ಪ್ರಯಾಣ ಬೆಳೆಸುತ್ತಿದ್ದ ಸ್ನೇಹಿತನಿಂದ ಲಾಕ್‌ಡೌನ್ ಮಾಹಿತಿ ತಿಳಿಯಿತು ಎಂದು ಹೇಳಿದ್ದಾರೆ.

ಮನಿಘೆಟ್ಟಿ ಅವರ ಊರಲ್ಲೂ ಕೊರೋನ ಸೋಂಕು ವ್ಯಾಪಕವಾಗಿ ಹರಡಿದ್ದರೂ ಕುಟುಂಬ ಸುರಕ್ಷಿತವಾಗಿದೆ. ಪ್ರಸ್ತುತ ಈ ದಂಪತಿ ಸಂತ ವಿನ್ಸೆಂಟ್ಸ್‌ನ ಬೆಕ್ವಿಯಾ ಎಂಬಲ್ಲಿದೆ. ಎಲ್ಲ ಗಡಿಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಪ್ರಯಾಣ ಮುಂದುವರಿಸಲಾಗದೇ ಅಸಹಾಯಕರಾಗಿ ನಿಂತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News