ಫ್ಯಾನ್, ಶೌಚಾಲಯವಿಲ್ಲ: ವಾಸ್ತವ್ಯ ಕಟ್ಟಡದ ಅಸಹನೀಯ ಪರಿಸ್ಥಿತಿ ಬಗ್ಗೆ ವೀಡಿಯೋ ಬಿಡುಗಡೆ ಮಾಡಿದ ವೈದ್ಯರು

Update: 2020-04-23 07:57 GMT
Photo: ndtv.com

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸರಕಾರಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ತಮಗೆ ವಾಸಕ್ಕಾಗಿ ನೀಡಲಾಗಿರುವ ಸರಕಾರಿ ಶಾಲೆಯಲ್ಲಿನ ಅಸಹನೀಯ ಪರಿಸ್ಥಿತಿಯನ್ನು ವಿವರಿಸುವ ವೀಡಿಯೋಗಳನ್ನು ಬುಧವಾರ ರಾತ್ರಿ ಬಿಡುಗಡೆಗೊಳಿಸಿದ್ದಾರೆ. ಇದರ ಬೆನ್ನಿಗೇ ಅವರೆಲ್ಲರನ್ನೂ ಗೆಸ್ಟ್ ಹೌಸ್ ಒಂದಕ್ಕೆ ಸ್ಥಳಾಂತರಿಸಲಾಗಿದೆ.

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಮನೆಗಳಿಂದ ದೂರವಿರುವ ಈ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಕಷ್ಟಗಳನ್ನು ವಿವರಿಸಿ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಗೂ ಪತ್ರ ಬರೆದಿದ್ದರು.

ಕೋವಿಡ್-19 ರೋಗಿಗಳಿರುವ ಆಸ್ಪತ್ರೆಯ ಕಟ್ಟಡದ ಪಕ್ಕದ ಶಾಲೆಯಲ್ಲಿಯೇ ಅವರಿಗೆ ಈ ಹಿಂದೆ ವಾಸ್ತವ್ಯದ ಏರ್ಪಾಟು ಮಾಡಲಾಗಿತ್ತು. ಅವರು ಒಂದು ವೀಡಿಯೋವನ್ನು ಬುಧವಾರ ಬೆಳಿಗ್ಗೆ 3 ಗಂಟೆಗೆ ಚಿತ್ರೀಕರಿಸಿದ್ದರೆ ಇನ್ನೊಂದು ವೀಡಿಯೋವನ್ನು ಅದೇ ದಿನ ಮಧ್ಯಾಹ್ನದ ಊಟದ ವೇಳೆ ಚಿತ್ರೀಕರಿಸಿದ್ದರು.

“ಬೆಳಗ್ಗಿನ 3 ಗಂಟೆ. ವಿದ್ಯುತ್ ಇಲ್ಲ, ಒಂದು ಕೊಠಡಿಯಲ್ಲಿ ನಾಲ್ಕು ಮಂಚಗಳಿವೆ.  ಇದು ಪಂಚತಾರ ಕೊಠಡಿ, ಫ್ಯಾನ್ ಕೂಡ ತಿರುಗುವುದಿಲ್ಲ. ಶೌಚಾಲಯದಲ್ಲಿ ನಳ್ಳಿಯಿಲ್ಲ  ಹಾಗೂ ಅವ್ಯವಸ್ಥೆಯಿಂದ ತುಂಬಿದೆ'' ಎಂದು ಒಬ್ಬ ವ್ಯಕ್ತಿ ಹೇಳುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಅಪರಾಹ್ನ ತೆಗೆಯಲಾದ ವೀಡಿಯೋದಲ್ಲಿ ಪಾಲಿಥೀನ್ ಚೀಲದಲ್ಲಿ ಪೂರಿ ಹಾಗೂ ಪಲ್ಯ ಒಟ್ಟಿಗೇ ಹಾಕಲ್ಪಟ್ಟ ಊಟದ ಪಾರ್ಸೆಲ್‍ಗಳನ್ನು ತೋರಿಸಲಾಗಿದೆ.

ಮೂರನೇ ವೀಡಿಯೊದಲ್ಲಿ ವೈಯಕ್ತಿಕ ರಕ್ಷಾ ಕವಚ ಧರಿಸಿದ್ದ ವೈದ್ಯರೊಬ್ಬರು ಸಮಸ್ಯೆ ವಿವರಿಸುತ್ತಾ , “ಶೌಚಾಲಯ ಸರಿಯಿಲ್ಲವೆಂದಾಗ ಮೊಬೈಲ್ ಟಾಯ್ಲೆಟ್ ತಂದಿಡಲಾಯಿತು. ರಾತ್ರಿ ವಿದ್ಯುತ್ ಇಲ್ಲ. 20 ಲೀಟರ್ ನೀರಿನ ಬಾಟಲಿ ಕಳೆದ ರಾತ್ರಿ ನಮಗೆ ನೀಡಿ ನಾವು ಅದನ್ನು ಶೇರ್ ಮಾಡಬೇಕೆಂದು ಹೇಳಲಾಯಿತು'' ಎಂದಿದ್ದಾರೆ.

ಈ ಸಿಬ್ಬಂದಿ ಹಾಗೂ ವೈದ್ಯರನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು ಎಲ್ಲಾ ದೂರುಗಳನ್ನು ಪರಿಹರಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News