×
Ad

2 ಗಂಟೆ ಕಾದರೂ ಕೊರೋನ ಸೋಂಕಿತ ವ್ಯಕ್ತಿಯನ್ನು ದಾಖಲಿಸಲು ನಿರಾಕರಿಸಿದ ಆಸ್ಪತ್ರೆ: ಆರೋಪ

Update: 2020-04-23 17:25 IST

ಹೊಸದಿಲ್ಲಿ:  ತುರ್ತು ಚಿಕಿತ್ಸೆಗಾಗಿ ತಾನು ಲೋಕ್ ನಾಯಕ್ ಆಸ್ಪತ್ರೆಗೆ ದಾಖಲಾಗಲು ಬಯಸಿದ್ದರೂ ಆಸ್ಪತ್ರೆ ಅನುಮತಿ ನೀಡಿರಲಿಲ್ಲ ಎಂದು ದಿಲ್ಲಿಯ ಕೋವಿಡ್-19 ರೋಗಿಯೊಬ್ಬರು ಆರೋಪಿಸಿದ್ದಾರೆ.

ಲೋಕ್ ನಾಯಕ್ ಆಸ್ಪತ್ರೆ ಕೊರೋನ ರೋಗಿಗಳಿಗೆ ದಿಲ್ಲಿ ಸರಕಾರ ಮೀಸಲಿರಿಸಿರುವ ಅತಿ ದೊಡ್ಡ ಆಸ್ಪತ್ರೆಯಾಗಿದೆ.

ಚೂರಿವಾಲನ್ ಎಂಬ ಪ್ರದೇಶದ ನಿವಾಸಿ ನಸೀಂ ಪ್ರಕಾರ ಅವರು ಹಾಗೂ ಕುಟುಂಬ ಸದಸ್ಯರು ಕೊರೋನ ಪರೀಕ್ಷೆಯನ್ನು ಖಾಸಗಿ ಲ್ಯಾಬ್ ಮುಖಾಂತರ ನಡೆಸಿದ್ದು, ವರದಿ ಪಾಸಿಟಿವ್ ಬಂದ ನಂತರ ಲೋಕ್ ನಾಯಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ನಸೀಂ, ಪುತ್ರ, ಸೋದರಳಿಯ ಹಾಗೂ ಸಹೋದರ  ಹೊರಗೆ ಎರಡು ಗಂಟೆಗಳ ಕಾಲ ನಿಂತರೂ ಅಲ್ಲಿನ ಸಿಬ್ಬಂದಿಗಳ್ಯಾರೂ ಅವರ ಗೋಳು ಕೇಳಿಲ್ಲ. “ನಾವು ಮನೆಯಿಂದ ಆಸ್ಪತ್ರೆ ತನಕ ನಡೆದುಕೊಂಡೇ ಬಂದಿದ್ದೇವೆ. ನಾವು ದಾಖಲಾದ ನಂತರ ನಮ್ಮ ಕುಟುಂಬದ ಎರಡು ತಿಂಗಳ ಮಗು ಸಹಿತ ಇತರ ಕೊರೋನ ಪಾಸಿಟಿವ್ ಮಂದಿಯನ್ನು ಕರೆತರಬಹುದು ಎಂದು ಅಂದುಕೊಂಡಿದ್ದೆವು'' ಎಂದು ನಸೀಂ ಹೇಳಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ  ಡಾ ಜೆ ಸಿ ಪಾಸ್ಸಿ, “ಆ ಕುಟುಂಬದ ಹಸುಳೆ ಸಹಿತ ಮೂರು ಮಂದಿಯನ್ನು ದಾಖಲಿಸಿದ್ದೇವೆ” ಎಂದಿದ್ದಾರಲ್ಲದೆ ತಮ್ಮ ಆಸ್ಪತ್ರೆ ಕೆಟಗರಿ-3ಕ್ಕೆ ಸೇರಿರುವ ಕೋವಿಡ್-19 ರೋಗಿಗಳನ್ನು ಮಾತ್ರ ಅನುಮತಿ ನೀಡುತ್ತದೆ. ಬಹಳ ಅಸೌಖ್ಯದಿಂದಿರುವವರು ಹಾಗೂ ಐಸಿಯುವಿನಲ್ಲಿ ಚಿಕಿತ್ಸೆ ಬೇಕಾದವರು ಹಾಗೂ ವೆಂಟಿಲೇಟರ್ ಬೇಕಾದವರನ್ನು ಮಾತ್ರ ಇಲ್ಲಿ ದಾಖಲಿಸಲಾಗುತ್ತದೆ, ಇತರರು ಇತರ ಕೋವಿಡ್-ಕೇರ್ ಸೆಂಟರ್‍ಗಳಿಗೆ ತೆರಳಬೇಕು  ಎಂದು  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News