ಏರ್ ಕಂಡಿಷನರ್‌ಗಳು ಕೊರೋನ ಸೋಂಕನ್ನು ಹರಡುತ್ತವೆಯೇ?

Update: 2020-04-23 14:40 GMT

ಕೊರೋನ ವೈರಸ್ ಪಿಡುಗು ವಿಶ್ವಾದ್ಯಂತ ಕ್ಷಿಪ್ರವಾಗಿ ಹರಡುವುದರೊಂದಿಗೆ ಮಿಲಿಯಗಟ್ಟಲೆ ಜನರು ಸೋಂಕಿಗೊಳಗಾಗಿರುವ ಹಿನ್ನೆಲೆಯಲ್ಲಿ ಈ ಹೊಸ ವೈರಸ್‌ನ ಕುರಿತು ನಿರಂತರ ಅಧ್ಯಯನಗಳನ್ನು ನಡೆಸುತ್ತಿರುವ ಸಂಶೋಧಕರು ಮತ್ತು ವಿಜ್ಞಾನಿಗಳು ಈ ಮಾರಣಾಂತಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ರಕ್ಷಣಾತ್ಮಕ ಕ್ರಮಗಳನ್ನು ಶಿಫಾರಸು ಮಾಡುತ್ತಿದ್ದಾರೆ.

ಕೊರೋನ ವೈರಸ್ ಕಾರ್ಡ್‌ಬೋರ್ಡ್, ಪ್ಲಾಸ್ಟಿಕ್, ಸ್ಟೀಲ್ ಮತ್ತು ತಾಮ್ರದಂತಹ ಮೇಲ್ಮೈಗಳ ಮೇಲೆ ಹಲವಾರು ಗಂಟೆಗಳ ಕಾಲ ಬದುಕಿರುತ್ತದೆ ಎನ್ನುವುದನ್ನು ಇತ್ತೀಚಿನ ಹಲವಾರು ಅಧ್ಯಯನಗಳು ತೋರಿಸಿವೆ. ಕೊರೋನ ವೈರಸ್ ಸೋಂಕು ಪೀಡಿತ ವ್ಯಕ್ತಿಯು ಕೆಮ್ಮಿದಾಗ,ಸೀನಿದಾಗ ಅಥವಾ ಮಾಡನಾಡುವಾಗ ಹೊರಹೊಮ್ಮುವ ತುಂತುರು ಹನಿಗಳಿಂದ ವೈರಸ್ ಹರಡುತ್ತದೆಯೇ ಹೊರತು ಅದು ಗಾಳಿಯಿಂದ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದ್ದರೆ,ಏರ್ ಕಂಡಿಷನ್ ವ್ಯವಸ್ಥೆಯಿರುವ ಸ್ಥಳಗಳಲ್ಲಿ ಕೊರೋನ ವೈರಸ್ ಗಾಳಿಯ ಮೂಲಕ ಹರಡಬಲ್ಲದು ಎಂದು ಚೀನಿ ಅಧ್ಯಯನವೊಂದು ಹೇಳಿದೆ.

ಮುಚ್ಚಿದ ಸ್ಥಳಗಳಲ್ಲಿ ಏರ್ ಕಂಡಿಷನಿಂಗ್ ವ್ಯವಸ್ಥೆಯಲ್ಲಿ ಕೊರೋನ ವೈರಸ್ ಹರಡುವಿಕೆಯ ಸಾಧ್ಯತೆಯತ್ತ ಈ ಚೀನಿ ಅಧ್ಯಯನವು ಗಮನ ಹರಿಸಿತ್ತು. ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ ಪ್ರಕಟಿಸಿರುವ ಈ ಅಧ್ಯಯನ ವರದಿಯು ಚೀನಾದ ಗ್ವಾಂಗ್‌ಝೌ ನಗರದ ಏರ್‌ಕಂಡಿಷನ್ಡ್ ರೆಸ್ಟೋರಂಟ್‌ವೊಂದರಲ್ಲಿ ಊಟ ಮಾಡಿದ್ದ ಎ,ಬಿ ಮತ್ತು ಸಿ ಹೀಗೆ ಮೂರು ಕುಟುಂಬಗಳ 10 ಜನರಿಗೆ ಕೊರೋನ ವೈರಸ್ ಸೋಂಕು ತಗುಲಿದ್ದನ್ನು ಬೆಟ್ಟು ಮಾಡಿದೆ.

 ಕುಟುಂಬ ‘ಎ’ ವುಹಾನ್‌ನಿಂದ ಗ್ವಾಂಗ್‌ಝೌಗೆ ಆಗಮಿಸಿತ್ತು. ಈ ಕುಟುಂಬದ ಓರ್ವನಲ್ಲಿ ನಂತರ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಈತ ಊಟಕ್ಕೆಂದು ಕುಟುಂಬದ ಇತರ ಮೂವರೊಡನೆ ರೆಸ್ಟೋರೆಂಟ್‌ವೊಂದಕ್ಕೆ ತೆರಳಿದ್ದ. ಈ ವೇಳೆ ‘ಬಿ’ ಮತ್ತು ‘ಸಿ’ಕುಟುಂಬಗಳೂ ಊಟಕ್ಕೆಂದು ಅದೇ ರೆಸ್ಟಾರೆಂಟ್‌ಗೆ ಆಗಮಿಸಿದ್ದವು. ಈ ಎರಡೂ ಕುಟುಂಬಗಳ ಸದಸ್ಯರು ‘ಎ’ ಕುಟುಂಬ ಕುಳಿತಿದ್ದಲ್ಲಿಂದ ಸಮೀಪದಲ್ಲಿದ್ದ ಟೇಬಲ್‌ಗಳಲ್ಲಿ ಕುಳಿತುಕೊಂಡಿದ್ದರು. ಸಂಜೆಯ ವೇಳೆಗೆ ‘ಎ’ಕುಟುಂಬದ ಸದಸ್ಯನಲ್ಲಿ ಕೆಮ್ಮು ಮತ್ತು ಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೆಲವು ದಿನಗಳ ನಂತರ ಈ ಮೂರು ಕುಟುಂಬಗಳ ಒಟ್ಟು ಒಂಭತ್ತು ಸದಸ್ಯರು ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದರು. ಬಿ ಮತ್ತು ಸಿ ಕುಟುಂಬಗಳು ಸೋಂಕು ಹರಡುವಿಕೆಗೆ ಒಡ್ಡಿಕೊಳ್ಳಲು ‘ಎ’ ಕುಟುಂಬದ ಸದಸ್ಯ ಏಕೈಕ ಮೂಲವಾಗಿದ್ದ. ಈ ರೆಸ್ಟೋರಂಟ್ ಏರ್ ಕಂಡಿಷನ್ಡ್ ಆಗಿದ್ದು,ಕಿಟಕಿಗಳನ್ನು ಹೊಂದಿರಲಿಲ್ಲ ಮತ್ತು ಪ್ರತಿ ಟೇಬಲ್ ಇನ್ನೊಂದು ಟೇಬಲ್‌ನಿಂದ ಒಂದು ಮೀಟರ್ ಅಂತರದಲ್ಲಿತ್ತು. ‘ಸಿ’ ಕುಟುಂಬ ಕುಳಿತುಕೊಂಡಿದ್ದ ಟೇಬಲ್‌ನ ಮೇಲ್ಭಾಗದಲ್ಲಿ ಸೆಂಟ್ರಲ್ ಏರ್ ಕಂಡಿಷನರ್ ಅನ್ನು ಅಳವಡಿಸಲಾಗಿತ್ತು.

‘ಎ’ ಗುಂಪಿನ ಸದಸ್ಯ ಅಥವಾ ಅಧ್ಯಯನದಲ್ಲಿ ಹೇಳಿರುವಂತೆ ಇಂಡೆಕ್ಸ್ ಕೇಸ್ ರೋಗಿಯು ಕೊರೋನ ವೈರಸ್ ಲಕ್ಷಣರಹಿತನಾಗಿದ್ದು,ಆತನಲ್ಲಿ ಸೋಂಕು ಇರುವ ಯಾವುದೇ ಸುಳಿವುಗಳು ಗೋಚರಿಸಿರಲಿಲ್ಲ, ಆದರೆ ಆತನಿಂದಲೇ ವೈರಸ್ ಹರಡಿತ್ತು. ವೈರಸ್ ಹರಡುವಿಕೆ ಹನಿಗಳ ಹರಡುವಿಕೆಯಿಂದ ಉಂಟಾಗಿತ್ತು ಎಂದು ಅಧ್ಯಯನವು ಹೇಳಿದೆ. ಏರ್ ಕಂಡಿಷನರ್‌ನಿಂದ ರಭಸದಿಂದ ಹೊರಬರುವ ತಂಗಾಳಿಯ ಅಲೆಯಿಂದಾಗಿ ಸೋಂಕು ಸುಲಭವಾಗಿ ಹರಡಿತ್ತು ಎನ್ನುವುದನ್ನು ಅಧ್ಯಯನ ವರದಿಯು ಬೆಳಕಿಗೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News