×
Ad

ದೇಶದ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ: ಸಮಿತಿ ಅಧ್ಯಕ್ಷೆಯಾಗಿ ನೃತ್ಯ ಕಲಾವಿದೆ ಲೀಲಾ ಸ್ಯಾಮ್ಸನ್ ನೇಮಕ

Update: 2020-04-23 22:20 IST

ಹೊಸದಿಲ್ಲಿ, ಎ.23: ಜೆಸಿಬಿ ಪ್ರೈಝ್ ಫಾರ್ ಲಿಟರೇಚರ್ ತನ್ನ ಎರಡನೇ ವರ್ಷದ ಪ್ರಶಸ್ತಿಗಾಗಿ ಆಯ್ಕೆ ಸಮಿತಿಯನ್ನು ಪ್ರಕಟಿಸಿದ್ದು, ಖ್ಯಾತ ಭರತನಾಟ್ಯ ಕಲಾವಿದೆ ಮತ್ತು ಲೇಖಕಿ ಲೀಲಾ ಸ್ಯಾಮ್ಸನ್ ಅವರು ಸಮಿತಿಯ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.

ಪ್ರಶಸ್ತಿಯು ವಿಜೇತರಿಗೆ 25 ಲ.ರೂ., ಮತ್ತು ಕಿರುಪಟ್ಟಿಗೆ ಆಯ್ಕೆಯಾದ ಕೃತಿಗಳ ಲೇಖಕರಿಗೆ ತಲಾ ಒಂದು ಲ.ರೂ.ಗಳ ನಗದು ಬಹುಮಾನಗಳನ್ನು ಹೊಂದಿದೆ. ಇಂಗ್ಲಿಷ್‌ಗೆ ಅನುವಾದಗೊಂಡಿರುವ ಕೃತಿಗಳು ಮತ್ತು ಮೂಲತಃ ಇಂಗ್ಲಿಷ್‌ನಲ್ಲಿ ರಚಿಸಲಾದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಕಿರುಪಟ್ಟಿಯಲ್ಲಿರುವ ಒಂದು ಅಥವಾ ಅದಕ್ಕೂ ಹೆಚ್ಚಿನ ಕೃತಿಗಳು ಅನುವಾದಿತವಾಗಿದ್ದರೆ ಅನುವಾದಕರಿಗೆ 50,000 ರೂ. ಮತ್ತು ಪ್ರಶಸ್ತಿ ವಿಜೇತ ಕೃತಿಯು ಅನುವಾದಿತವಾಗಿದ್ದರೆ ಅನುವಾದಕರಿಗೆ 10 ಲ.ರೂ.ಗಳನ್ನು ನೀಡಲಾಗುತ್ತದೆ. 2019ರಲ್ಲಿ ಆರಂಭಿಕ ಪ್ರಶಸ್ತಿಯು ಮಾಧುರಿ ವಿಜಯ ಅವರ ಚೊಚ್ಚಲು ಕೃತಿ ‘ದಿ ಫಾರ್ ಫೀಲ್ಡ್’ಗೆ ಲಭಿಸಿತ್ತು.

ಸಂಗೀತ ನಾಟಕ ಅಕಾಡೆಮಿ ಹಾಗೂ ಕೇಂದ್ರೀಯ ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷೆಯಾಗಿರುವ ಸ್ಯಾಮ್ಸನ್ ರಿದಂ ಇನ್ ಜಾಯ್,ಕ್ಲಾಸಿಕಲ್ ಇಂಡಿಯನ್ ಡ್ಯಾನ್ಸ್ ಟ್ರೆಡಿಷನ್ಸ್ ಮತ್ತು ರುಕ್ಮಿಣಿ ದೇವಿ:ಎ ಲೈಫ್ ಕೃತಿಗಳ ಲೇಖಕಿಯೂ ಆಗಿದ್ದಾರೆ.

ಲೇಖಕರು,ಅನುವಾದಕರು ಮತ್ತು ಪ್ರೊಫೆಸರ್‌ಗಳಾಗಿರುವ ಆರುಣಿ ಕಶ್ಯಪ ಮತ್ತು ತೇಜಸ್ವಿನಿ ನಿರಂಜನ,ನಾಟಕಕಾರ ಮತ್ತು ರಂಗ ನಿರ್ದೇಶಕ ರಾಮು ರಾಮನಾಥನ್ ಮತ್ತು ಟಾಟಾ ಟ್ರಸ್ಟ್‌ನ ಆರ್ಟ್ಸ್ ಆ್ಯಂಡ್ ಕಲ್ಚರ್‌ನ ಮುಖ್ಯಸ್ಥ ದೀಪಿಕಾ ಸೋರಾಬ್ಜಿ ಅವರು ಆಯ್ಕೆ ಸಮಿತಿಯ ಇತರ ಸದಸ್ಯರಾಗಿದ್ದಾರೆ. ಮೀತಾ ಕಪೂರ್ ಅವರು ಜೆಸಿಬಿ ಪ್ರೈಝ್ ಫಾರ್ ಲಿಟರೇಚರ್‌ನ ನಿರ್ದೇಶಕಿಯಾಗಿದ್ದಾರೆ.

ಸೆ.1ರಂದು 10 ಕೃತಿಗಳ ಮತ್ತು ಸೆ.25ರಂದು ಐದು ಕೃತಿಗಳ ಕಿರುಪಟ್ಟಿಗಳು ಪ್ರಕಟಗೊಳ್ಳಲಿದ್ದು,ಪ್ರಶಸ್ತಿ ಪ್ರದಾನ ಸಮಾರಂಭವು ನ.17ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News