ಜೈಲಿನಿಂದ ಬಿಡುಗಡೆಯಾದ ಸಹೋದರರ ಥಳಿಸಿ ಹತ್ಯೆಗೈದ ಗುಂಪು

Update: 2020-04-23 17:29 GMT

ಗುವಾಹಟಿ, ಎ.23: ಇಬ್ಬರು ಸಹೋದರರನ್ನು ಸ್ಥಳೀಯರ ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ಅಸ್ಸಾಂನ ಅಥಿಯಾಬರಿ ಗ್ರಾಮದಲ್ಲಿ ಬುಧವಾರ ನಡೆದಿರುವುದಾಗಿ ವರದಿಯಾಗಿದೆ. ಮೃತಪಟ್ಟವರನ್ನು ಬಿಸ್ವಜಿತ್ ದಾಸ್(24 ವರ್ಷ) ಮತ್ತು ಹರಧನ್ ದಾಸ್(35 ವರ್ಷ) ಎಂದು ಗುರುತಿಸಲಾಗಿದೆ.

ಇಬ್ಬರೂ ಕುಖ್ಯಾತ ಕ್ರಿಮಿನಲ್‌ಗಳಾಗಿದ್ದು ಡಕಾಯಿತಿ, ಅಪಹರಣ, ಸುಲಿಗೆ ಮುಂತಾದ ಆರೋಪದಲ್ಲಿ ಜೈಲಿನಲ್ಲಿದ್ದರು. ಆದರೆ ಕೊರೋನ ವೈರಸ್ ಹಿನ್ನೆಲೆಯಲ್ಲಿ, ಜೈಲಿನಲ್ಲಿ ಕೈದಿಗಳು ಕಿಕ್ಕಿರಿದು ತುಂಬಿದ್ದರೆ ಅಪಾಯ ಎಂಬ ಕಾರಣದಿಂದ ಸುಪ್ರೀಂಕೋರ್ಟ್ ಕೆಲವು ಕೈದಿಗಳಿಗೆ ಜಾಮೀನು ಮಂಜೂರುಗೊಳಿಸಲು ಸೂಚಿಸಿತ್ತು. ಇದರಂತೆ ಇವರಿಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇವರು ಮನೆಗೆ ಮರಳಿದ ಬಳಿಕ ಯಾವುದೋ ವಿಷಯಕ್ಕೆ ಗ್ರಾಮಸ್ಥರೊಂದಿಗೆ ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಗ್ರಾಮಸ್ಥರ ತಂಡ ಇವರ ಮನೆಗೆ ನುಗ್ಗಿ ಹಲ್ಲೆ ನಡೆಸಿದೆ. ತಡೆಯಲು ಬಂದ ಬಿಸ್ವಜಿತ್ ದಾಸ್‌ನ ತಾಯಿ ಮತ್ತು ಪತ್ನಿಯ ಮೇಲೂ ಹಲ್ಲೆ ನಡೆಸಿ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ತೀವ್ರ ಗಾಯಗೊಂಡಿದ್ದ ಬಿಸ್ವಜಿತ್ ಮತ್ತು ಹರಧನ್‌ರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದು ಗುಂಪಿನಿಂದ ನಡೆದ ಹಲ್ಲೆ ಮತ್ತು ಹತ್ಯೆಯ ಪ್ರಕರಣವಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಗುಂಪಿನಿಂದ ಹಲ್ಲೆಗೊಳಗಾಗುವವರು ಅಪರಿಚಿತ ವ್ಯಕ್ತಿಗಳು. ಆದರೆ ಇಲ್ಲಿ ಹಲ್ಲೆ ನಡೆಸಿದವರು ಮತ್ತು ಹಲ್ಲೆಗೊಳಗಾದವರು ಒಂದೇ ಪ್ರದೇಶದ ನಿವಾಸಿಗಳು. ಹಳ್ಳಿಯ ಜನರಲ್ಲಿದ್ದ ದ್ವೇಷತ್ವ ಈ ಘಟನೆಗೆ ಕಾರಣ ಎಂದು ಅವರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭೋಲಾ ಸಹಾನಿ ಮತ್ತು ಕಾಂಚನ್ ದೇಬನಾಥ್ ಎಂಬವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾಂಚನ್ ದೇಬನಾಥ್ ಅಖಿಲ ಅಸ್ಸಾಂ ಹಿಂದು ಸುರಕ್ಷಾ ಸೇನಾ(ಎಎಎಚ್‌ಎಸ್‌ಎಸ್)ದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News