ಕೊರೋನ ವೈರಸ್ ಸೋಂಕಿತರನ್ನು ಕಾಶ್ಮೀರದೊಳಗೆ ನುಗ್ಗಿಸಲು ಪಾಕ್ ಯತ್ನ: ಪೊಲೀಸ್ ಅಧಿಕಾರಿ ಹೇಳಿಕೆ

Update: 2020-04-23 17:50 GMT

ಶ್ರೀನಗರ, ಎ.23: ಪಾಕಿಸ್ತಾನವು ಕೊರೋನ ವೈರಸ್ ಸೋಂಕಿತ ವ್ಯಕ್ತಿಗಳನ್ನು ಜಮ್ಮು ಮತ್ತು ಕಾಶ್ಮೀರದೊಳಗೆ ನುಗ್ಗಿಸಿ ಆ ಮೂಲಕ ಮಾರಣಾಂತಿಕ ಕಾಯಿಲೆಯನ್ನು ಕಾಶ್ಮೀರ ಕಣಿವೆಯಲ್ಲಿ ವ್ಯಾಪಕಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಶ್ರೀನಗರದ ಸಮೀಪವಿರುವ ಗಂಡೇರ್‌ಬಾಲ್ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಇದುವರೆಗೆ ಕಾಶ್ಮೀರದ ಕಣಿವೆಗೆ ಉಗ್ರರನ್ನು ರವಾನಿಸುತ್ತಿದ್ದ ಪಾಕಿಸ್ತಾನ ಈಗ ಕೊರೋನ ಸೋಂಕಿತರನ್ನು ನುಗ್ಗಿಸಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಪುರಾವೆ ಲಭಿಸಿದೆ. ಈ ಬಗ್ಗೆ ಜಾಗರೂಕತೆ ವಹಿಸಬೇಕಾಗಿದೆ ಎಂದು ಹೇಳಿದರು.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕೊರೋನ ಸೋಂಕಿತರನ್ನು ಕಳುಹಿಸಿ ಅಲ್ಲಿಂದ ಭಾರತದೊಳಗೆ ನುಗ್ಗಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಕಳೆದ ವಾರ ಸೇನೆಯ ಉನ್ನತ ಕಮಾಂಡರ್ ಒಬ್ಬರು ಹೇಳಿಕೆ ನೀಡಿದ್ದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 50 ಕೊರೋನ ಸೋಂಕಿತರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕೆರನ್ ವಲಯದಲ್ಲಿ ಉಗ್ರರು ಗಡಿ ದಾಟಿ ಒಳನುಸುಳಲು ನಡೆಸಿದ್ದ ಯತ್ನವನ್ನು ಭಾರತದ ಸೇನೆ ವಿಫಲಗೊಳಿಸಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತದ ಐವರು ಯೋಧರು ಮೃತಪಟ್ಟಿದ್ದರೆ ಐವರು ಉಗ್ರರೂ ಸಾವನ್ನಪ್ಪಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 400ಕ್ಕೂ ಹೆಚ್ಚು ಕೊರೋನ ಸೋಂಕು ಪ್ರಕರಣ ದೃಢಪಟ್ಟಿದ್ದು ಮೂವರು ಪೊಲೀಸರಿಗೂ ಸೋಂಕು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News