ಕಸ ಸಾಗಿಸುವ ಆಟೊ-ಲಾರಿ ಚಾಲಕರಿಗೆ 4 ತಿಂಗಳಿಂದ ಸಂಬಳ ಸಿಕ್ಕಿಲ್ಲ!

Update: 2020-04-25 05:52 GMT

ಬೆಂಗಳೂರು: ಕೊರೋನ ಸೋಂಕಿನ ನಡುವೆಯು ನಗರದಲ್ಲಿ ಕಸವನ್ನು ಬೇರೆಡೆಗೆ ಸಾಗಿಸುವಂತಹ ಆಟೊ, ಲಾರಿ ಚಾಲಕರು ಹಾಗೂ ಸಹಾಯಕರಿಗೆ 4 ತಿಂಗಳಿಂದ ಸಂಬಳ ಸಿಕ್ಕಿಲ್ಲ. ಇದರ ನಡುವೆಯೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ಕೊರೋನ ಸೋಂಕಿನ ಪರಿಸ್ಥಿತಿಯಲ್ಲಿಯೂ ವೈದ್ಯರು, ಪೊಲೀಸರಷ್ಟೇ ಮುಖ್ಯನೆಲೆಯಲ್ಲಿ ನಿಂತು ಪೌರಕಾರ್ಮಿಕರು ಹಾಗೂ ನಗರದಲ್ಲಿರುವ ಕಸವನ್ನು ಬೇರೆಡೆಗೆ ಸಾಗಿಸುವಂತಹ ಆಟೊ, ಲಾರಿ, ಚಾಲಕರ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇವರ ಬದುಕಿಗೆ ಕನಿಷ್ಠ ಸೌಲಭ್ಯವನ್ನು ನೀಡುತ್ತಿಲ್ಲವೆಂದು ಬೆಂಗಳೂರಿನ ಸಫಾರಿ ಕರ್ಮಚಾರಿಗಳ ಆಯೋಗದ ಸದಸ್ಯ ಆನಂದ್ ಆರೋಪಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸುಮಾರು 4 ಸಾವಿರ ಮಂದಿ ನಗರದ ಕಸವನ್ನು ಸಾಗಿಸುವಂತಹ ಆಟೊ ಮತ್ತು ಲಾರಿ ಚಾಲಕರಿದ್ದಾರೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಇಡೀ ನಗರದ ಜನತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮನೆಯಲ್ಲಿದ್ದಾರೆ. ಆದರೆ, ನಗದ ಪೌರಕಾರ್ಮಿಕರು ಹಾಗೂ ಕಸವನ್ನು ಸಾಗಿಸುವಂತಹ ಆಟೊ-ಲಾರಿ ಚಾಲಕರು ಹಾಗೂ ಸಹಾಯಕರು ನಗರವನ್ನು ಆರೋಗ್ಯವಾಗಿಡುವ ದೃಷ್ಟಿಯಿಂದ ಪ್ರತಿದಿನ ಸ್ಚಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ಕನಿಷ್ಠ ಸಂಬಳವಿಲ್ಲ: ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಹಾಗೂ ಸಹಾಯಕರಿಗೆ ಹೆಚ್ಚಿನ ಸಂಬಳ, ವಿಶೇಷ ಭತ್ತೆ ನೀಡಬೇಕೆಂದು ಸಾರ್ವಜನಿಕವಲಯದಿಂದ ಒತ್ತಾಯ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಸರಕಾರವು ಆ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಆದರೆ, ನಗರದ ಸ್ವಚ್ಛತೆಯನ್ನು ಕಾಪಾಡುವ ಕಸ ಸಾಗಿಸುವ ವಾಹನಗಳ ಚಾಲಕರಿಗೆ, ಕನಿಷ್ಠ ಅವರಿಗೆ ನ್ಯಾಯಬದ್ಧ್ದವಾಗಿ ಸಿಗಬೇಕಾದ ಸಂಬಳವೇ ಸಿಕ್ಕಿಲ್ಲ. ಕೊಡಬೇಕಾದವರ ನಿರ್ಲಕ್ಷದ ಬಗ್ಗೆ ಚಕಾರವೆತ್ತಿದರೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಪೌರಕಾರ್ಮಿಕರಿಗೆ ಆಗಲಿ, ಕಸವನ್ನು ಸಾಗಿಸುವಂತಹ ಲಾರಿ ಚಾಲಕರೇ ಆಗಲಿ, ತಮಗೆ ಸಂಬಳ ಸಿಗಲಿ, ಬಿಡಲಿ, ಮಳೆ, ಚಳಿ ಎನ್ನದೇ ತಮ್ಮ ದಿನದ ಕಾರ್ಯವನ್ನು ಚಾಚೂತಪ್ಪದೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇವರಿಗೆ ಕನಿಷ್ಠ ಸಂಬಳ ಕೊಡದೆ ಸತಾಯಿಸುತ್ತಿರುವುದು ತುಂಬಾ ನೋವುಂಟು ಮಾಡಿದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಸಂಬಳವನ್ನು ನಮ್ಮನ್ನು ನೇಮಿಸಿಕೊಂಡಿರುವ ಗುತ್ತಿಗೆದಾರರು ಕೊಡಬೇಕು. ಅವರಿಗೆ ಬಿಬಿಎಂಪಿ ವತಿಯಿಂದ 7-8 ತಿಂಗಳ ಹಣ ಬಿಡುಗಡೆ ಆಗಿಲ್ಲ. ಆದರೂ ಗುತ್ತಿಗೆದಾರರು ಎರಡು ಮೂರು ತಿಂಗಳ ಸಂಬಳ ಕೊಟ್ಟಿದ್ದಾರೆ. ಆದರೆ, ಜನೆವರಿ, ಫೆಬ್ರವರಿ, ಮಾರ್ಚ್ ತಿಂಗಳ ಸಂಬಳ ನಮಗೆ ಸಿಕ್ಕಿಲ್ಲ. ಇದರಿಂದ ಮನೆ ನಡೆಸುವುದು ಕಷ್ಟವಾಗುತ್ತಿದೆ. ಆದರೂ ಪ್ರತಿದಿನ ನಾವು ಕೆಲಸ ಮಾಡುವುದನ್ನು ಬಿಟ್ಟಿಲ್ಲ.

 ಸುನಿಲ್, ಆಟೊ ಚಾಲಕ

ನಗರದ ಕಸವನ್ನು ಬೇರೆಡೆ ಸಾಗಿಸುವಂತಹ ಸುಮಾರು 4 ಸಾವಿರ ಲಾರಿ, ಆಟೋ ಹಾಗೂ ಸಹಾಯಕರಿದ್ದಾರೆ. ಪ್ರತಿಯೊಬ್ಬರಿಗೂ ತಿಂಗಳಿಗೆ 13ರಿಂದ 14ಸಾವಿರ ರೂ. ಸಂಬಳವಿದೆ. ಇವರಿಗೆ 3ರಿಂದ 4ತಿಂಗಳಿಂದ ಸಂಬಳ ಸಿಕ್ಕಿಲ್ಲ. ಗುತ್ತಿಗೆದಾರರಿಗೆ ಬಿಬಿಎಂಪಿ ಹಣ ಬಿಡುಗಡೆ ಮಾಡುತ್ತಿಲ್ಲ. ಒಂದು ವೇಳೆ ಇವರು ಎರಡು ದಿನ ತಮ್ಮ ಕೆಲಸವನ್ನು ನಿಲ್ಲಿಸಿದರೆ ಬೆಂಗಳೂರಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. 

ಆನಂದ್,

ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ

Writer - ಮಂಜುನಾಥ ದಾಸನಪುರ

contributor

Editor - ಮಂಜುನಾಥ ದಾಸನಪುರ

contributor

Similar News