ಉತ್ತರ ಪ್ರದೇಶ: ಕೊರೋನ ಸೋಂಕಿತರನ್ನು ಒಂದು ಗಂಟೆ ಗೇಟಿನ ಹೊರಗೆ ಕಾಯಿಸಿದ ಇಟಾವ ಆಸ್ಪತ್ರೆ
ಲಕ್ನೋ: ಉತ್ತರ ಪ್ರದೇಶದ ಇಟಾವ ಜಿಲ್ಲೆಯಲ್ಲಿನ ಸೈಫೈ ಎಂಬಲ್ಲಿನ ಸರಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಬೀಗ ಹಾಕಲ್ಪಟ್ಟ ಗೇಟಿನ ಹೊರಗೆ ಫುಟ್ಪಾತಿನಲ್ಲಿ 69 ಕೊರೋನವೈರಸ್ ರೋಗಿಗಳನ್ನು ಕನಿಷ್ಠ ಒಂದು ಗಂಟೆ ಕಾಯಿಸಿದ ಘಟನೆ ಗುರುವಾರ ನಡೆದಿದೆ. ಈ ರೊಗಿಗಳೆಲ್ಲರೂ ಆಸ್ಪತ್ರೆಗೆ ದಾಖಲಾಗಲು ಬಂದವರಾಗಿದ್ದು ಆಸ್ಪತ್ರೆಯ ವೈದ್ಯರು ಮತ್ತಿತರ ಸಿಬ್ಬಂದಿ ಕೊನೆಗೂ ಅವರನ್ನು ಆಸ್ಪತ್ರೆಯ ಐಸೊಲೇಶನ್ ವಾರ್ಡಿಗೆ ದಾಖಲಿಸಿಕೊಂಡಿದ್ದಾರೆ.
ಆಗ್ರಾದಿಂದ ಈ ರೋಗಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಸೈಫೈ ಎಂಬಲ್ಲಿರುವ ಉತ್ತರ ಪ್ರದೇಶ ಯುನಿವರ್ಸಿಟಿ ಆಫ್ ಮೆಡಿಕಲ್ ಸಾಯನ್ಸಸ್ ಹೊರಗೆ ರೋಗಿಗಳು ಕಾದಿದ್ದ ಹಲವು ವೀಡಿಯೋಗಳು ಹರಿದಾಡುತ್ತಿವೆ.
ಸ್ಥಳಕ್ಕೆ ಆಗಮಿಸಿದ ಮೊದಲ ಪೊಲೀಸ್ ಅಧಿಕಾರಿ ರೋಗಿಗಳನ್ನು ದೂರದಿಂದಲೇ ಉದ್ದೇಶಿಸಿ ಮಾತನಾಡುತ್ತಿರುವುದು ಕೇಳಿಸುತ್ತದೆ. "ಇಲ್ಲಿಯೇ ನಿಂತಿರಿ, ವೈದ್ಯಕೀಯ ತಂಡ ಆಗಮಿಸಿ ನಿಮ್ಮನ್ನು ಕರೆದುಕೊಂಡು ಹೋಗುವುದು. ನೀವು ಎಲ್ಲಿಯೂ ಓಡಾಡಬೇಡಿ, ಇಲ್ಲದೇ ಇದ್ದರೆ ಇತರರಿಗೂ ಸೋಂಕು ತಗಲಬಹುದು. ಇಲ್ಲಿ ಯಾವುದೇ ಮಾಹಿತಿ ನೀಡದೆ ಒಮ್ಮೆಗೇ ಆಗಮಿಸಿದ್ದರಿಂದ ಸಮಸ್ಯೆಯಾಗಿದೆ,'' ಎಂದು ಪೊಲೀಸ್ ಅಧಿಕಾರಿ ಚಂದ್ರ ಪಾಲ್ ಸಿಂಗ್ ಸೋಂಕಿತರಿಗೆ ಹೇಳುತ್ತಿರುವುದು ಕೇಳಿಸುತ್ತದೆ.
ಸಂವಹನೆಯ ಕೊರತೆಯಿಂದ ಹೀಗಾಗಿದೆ, ಅದಕ್ಕೆ ಆಸ್ಪತ್ರೆಯ ಸಿಬ್ಬಂದಿಯನ್ನು ದೂರುವುದು ಸರಿಯಲ್ಲ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಹೇಳಿದ್ದಾರೆ.