×
Ad

ಲಾಕ್‌ಡೌನ್ ಹಿನ್ನೆಲೆ: ಮನೆಕೆಲಸದಾಕೆಯ ಅಂತ್ಯಕ್ರಿಯೆ ನೆರವೇರಿಸಿದ ಗಂಭೀರ್

Update: 2020-04-25 13:11 IST

ಹೊಸದಿಲ್ಲಿ,ಎ.25: ಕೊರೋನವೈರಸ್‌ನಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಭಾರತದ ವಿಶ್ವಕಪ್ ವಿಜೇತ ತಂಡದ ಸದಸ್ಯ,ಮಾಜಿ ಓಪನರ್ ಗೌತಮ್ ಗಂಭೀರ್ ತಮ್ಮನ್ನು ಅಗಲಿದ ಮನೆಕೆಲಸದಾಕೆಯ ಅಂತ್ಯಕ್ರಿಯೆಯನ್ನು ಸ್ವತಃ ನೆರವೇರಿಸಿ ಮಾನವೀಯತೆ ಮೆರೆದರು.ಲಾಕ್‌ಡೌನ್‌ನಿಂದಾಗಿ ಕೆಲಸದಾಕೆಯ ಮೃತದೇಹವನ್ನು ಆಕೆಯ ತವರು ರಾಜ್ಯ ಒಡಿಶಾಕ್ಕೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಗಂಭೀರ್ ಮುಂದೆ ನಿಂತು ದಿಲ್ಲಿಯಲ್ಲಿ ಅಂತಿಮಕ್ರಿಯೆ ನೆರೆವೇರಿಸಿದರು.

ದಿಲ್ಲಿಯ ಬಿಜೆಪಿ ಸಂಸದನಾಗಿರುವ ಗಂಭೀರ್ ತನ್ನ ಮನೆಯಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಒಡಿಶಾದ ಜೈಪುರ ಜಿಲ್ಲೆಯ ಮಹಿಳೆ ಸರಸ್ವತಿ ಪಾತ್ರ ಅವರಿಗೆ ಟ್ವಿಟರ್‌ನಲ್ಲಿ ಅಂತಿಮ ನಮನ ಸಲ್ಲಿಸಿದರು.

 ನನ್ನ ಮಕ್ಕಳ ಆರೈಕೆ ಮಾಡುತ್ತಿದ್ದ ಸರಸ್ವತಿ ಪಾತ್ರ ನಮ್ಮ ಕುಟುಂಬ ಸದಸ್ಯರಂತೆ ಇದ್ದರು. ಅವರ ಅಂತಿಮ ಕ್ರಿಯೆ ನೆರವೇರಿಸುವುದು ನನ್ನ ಕರ್ತವ್ಯ ಎಂದು ಗಂಭೀರ್ ಟ್ವೀಟ್ ಮಾಡಿದರು.

38ರ ಹರೆಯದ ಸರಸ್ವತಿ ಕಳೆದ ಕೆಲವು ದಿನಗಳ ಹಿಂದೆ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ದೀರ್ಘ ಸಮಯದಿಂದ ಮಧುಮೇಹ ಹಾಗೂ ತೀವ್ರ ರಕ್ತದೊತ್ತಡದಿಂದ ಬಳಲುತ್ತಿದ್ದರು. ಎಪ್ರಿಲ್ 21ರಂದು ಚಿಕಿತ್ಸೆ ನಡೆಯುತ್ತಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ.

ಕೇಂದ್ರ ಪೆಟ್ರೋಲಿಯಂ ಹಾಗೂ ಸ್ಟೀಲ್ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗಂಭೀರ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News