“ನನಗೆ ಜೀವ ಬೆದರಿಕೆಯಿದೆ, ಲಾಕ್ ಡೌನ್ ನಂತರ ರಾಜೀನಾಮೆ ನೀಡುತ್ತೇನೆ”: ಮಹಿಳಾ ಐಎಎಸ್ ಅಧಿಕಾರಿ

Update: 2020-04-25 12:58 GMT

ಚಂಡೀಗಢ್: ಹರ್ಯಾಣದ ಆರ್ಕೈವ್ಸ್ ಇಲಾಖೆಯಲ್ಲಿ ನಿರ್ದೇಶಕಿಯಾಗಿ  ಕಾರ್ಯನಿರ್ವಹಿಸುತ್ತಿರುವ ಹರ್ಯಾಣ ಕೇಡರ್‍ನ 2014ನೇ ಬ್ಯಾಚಿನ ಐಎಎಸ್ ಅಧಿಕಾರಿ ರಾಣಿ ನಗರ್ ಎಂಬವರು ಕೊರೋನ ವೈರಸ್ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್ ಡೌನ್ ತೆರವುಗೊಳಿಸಿದ ನಂತರ ಐಎಎಸ್ ಸೇವೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

“ನಾನು ರಾಣಿ ನಗರ್, ಗೌತಮ್ ಬುದ್ಧ್ ನಗರ್ ಜಿಲ್ಲೆಯ ದಾದ್ರಿ ತೆಹ್ಸಿಲ್ ಇಲ್ಲಿನ ಬದಲ್ಪುರ್ ಎಂಬಲ್ಲಿನ ಗಝಿಯಾಬಾದ್  ನಿವಾಸಿ ರತನ್ ಸಿಂಗ್ ನಗರ್ ಎಂಬವರ ಪುತ್ರಿ, ಐಎಎಸ್‍ಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದೇನೆ'' ಎಂದು 38 ವರ್ಷದ ರಾಣಿ ತನ್ನ ಫೇಸ್ ಬುಕ್ ಹಾಗೂ ಟ್ವಿಟರ್ ಪುಟಗಳಲ್ಲಿ ಹಿಂದಿಯಲ್ಲಿ ಬರೆದಿದ್ದಾರೆ.

“ಸದ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಂಡೀಗಢದಿಂದ ಗಾಝಿಯಾಬಾದ್ ವರೆಗಿನ ರಸ್ತೆ ಬಂದ್ ಆಗಿದೆ. ಲಾಕ್ ಡೌನ್ ತೆರವುಗೊಳಿಸಿದ ನಂತರ ಗಝಿಯಾಬಾದ್‍ನ ಹೆತ್ತವರ ಮನೆಗೆ ಸರಕಾರದ ಅನುಮತಿಯೊಂದಿಗೆ ತೆರಳುತ್ತೇನೆ'' ಎಂದು ಆಕೆ ಬರೆದಿದ್ದಾರೆ.

ಫೇಸ್ ಬುಕ್ ‍ನಲ್ಲಿ ವೀಡಿಯೋವೊಂದನ್ನೂ ಪೋಸ್ಟ್ ಮಾಡಿರುವ ಅವರು ತಾವು ಮೇ 2018ರಿಂದ ಚಂಡೀಗಢದ ಯುಟಿ ಗೆಸ್ಟ್ ಹೌಸ್‍ನಲ್ಲಿ ತಮ್ಮ ಸೋದರಿ ಜತೆ ಉಳಿದಿರುವುದಾಗಿ ತಿಳಿಸುತ್ತಾರೆ.

 ಕಳೆದ ವರ್ಷ ಅವರು ಚಂಡೀಗಢ ನ್ಯಾಯಾಲಯಕ್ಕೆ ಹರ್ಯಾಣದ ಸರಕಾರಿ ಅಧಿಕಾರಿ ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. “ನಮ್ಮ ಜೀವಕ್ಕೆ  ಬೆದರಿಕೆಯಿದೆ. ಒಂದು ವೇಳೆ ನಮ್ಮ ಪ್ರಾಣ ಹೋದರೆ ಅಥವಾ ನಾವು ನಾಪತ್ತೆಯಾದರೆ, ನನ್ನ ಹೇಳಿಕೆಯನ್ನು ಕೇಸ್ ನಂಬರ್ 3573/2019ಗೆ ಸಂಬಂಧಿಸಿದಂತೆ ಚಂಡೀಗಢದಲ್ಲಿರುವ ನ್ಯಾಯಾಲಯದ ಗಮನಕ್ಕೆ ತನ್ನಿ, ನಿಮಗೆ ಆಭಾರಿಯಾಗಿರುತ್ತೇನೆ'' ಎಂದು ಆಕೆ ವೀಡಿಯೋದಲ್ಲಿ ಹೇಳಿದ್ದಾರೆ.

2018ರಲ್ಲಿ ಸಾಮಾಜಿಕ ಜಾಲತಾಣ ಪೋಸ್ಟ್ ಒಂದರಲ್ಲಿ ಆಕೆ ಹರ್ಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಆರೋಪ ಹೊರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News