1918 ರಲ್ಲಿ ಸ್ಪಾನಿಶ್ ಫ್ಲೂ ಜಯಿಸಿದ್ದ 106 ವರ್ಷದ ಅಜ್ಜಿ ಕೊರೋನ ವಿರುದ್ಧವೂ ವಿಜಯಿ
ಮ್ಯಾಡ್ರಿಡ್ (ಸ್ಪೇನ್), ಎ. 25: ಪವಾಡಗಳು ಆಗಾಗ ನಡೆಯುತ್ತವೆ ಎನ್ನುವ ಮಾತಿದೆ. ಆ ಮಾತಿಗೆ ಇನ್ನೂ ಒಂದು ಉದಾಹರಣೆಯೆಂಬಂತೆ, 1918ರ ಸ್ಪಾನಿಶ್ ಫ್ಲೂ ಸಾಂಕ್ರಾಮಿಕದಿಂದ ಬದುಕಿ ಉಳಿದಿರುವ 106 ವರ್ಷದ ಮಹಿಳೆಯೊಬ್ಬರು ಈಗ ನೂತನ-ಕೊರೋನವೈರಸ್ ಸಾಂಕ್ರಾಮಿಕವನ್ನು ಜಯಿಸಿ ಬಂದಿದ್ದಾರೆ.
1918ರಲ್ಲಿ ಸ್ಪೇನ್‌ನಲ್ಲಿ ಕಾಣಿಸಿಕೊಂಡಿದ್ದ ಮಾರಕ ಸಾಂಕ್ರಾಮಿಕ ರೋಗ ಸ್ಪಾನಿಶ್ ಫ್ಲೂ, ಬಳಿಕ ಜಗತ್ತಿನಾದ್ಯಂತ ಹರಡಿ 36 ತಿಂಗಳುಗಳ ಜನರನ್ನು ಕಾಡಿತ್ತು. ಈ ಅವಧಿಯಲ್ಲಿ ಅದರ ಸೋಂಕಿಗೆ 50 ಕೋಟಿ ಜನರು ಒಳಗಾಗಿದ್ದರು. ಇದು ಆಗಿನ ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟಾಗಿದೆ. ಸುಮಾರು ಐದು ಕೋಟಿ ಮಂದಿ ರೋಗಕ್ಕೆ ಬಲಿಯಾಗಿದ್ದಾರೆ.
1918ರಲ್ಲಿ ನಾಲ್ಕು ವರ್ಷದ ಮಗುವಾಗಿದ್ದ ಆನಾ ಡೆಲ್ ವ್ಯಾಲಿ ಈ ಮಾರಕ ಸಾಂಕ್ರಾಮಿಕದ ಸೋಂಕಿಗೆ ಒಳಗಾಗಿದ್ದರು ಹಾಗೂ ಬಳಿಕ ಚೇತರಿಸಿಕೊಂಡಿದ್ದರು ಎಂದು ಸ್ಪೇನ್‌ನ ಇಂಗ್ಲಿಷ್ ಭಾಷೆಯ ಪತ್ರಿಕೆ ‘ದ ಆಲಿವ್ ಪ್ರೆಸ್’ ವರದಿ ಮಾಡಿದೆ.
ಈಗ, 102 ವರ್ಷಗಳ ಬಳಿಕ ರೊಂಡ ಪಟ್ಟಣದ ನಿವಾಸಿಯಾಗಿರುವ ಈ ಅಜ್ಜಿ ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿಯೂ ಜಯ ಗಳಿಸಿದ್ದಾರೆ. ಅವರು ಈಗ ಅಲ್ಕಾಲ ಡೆಲ್ ವ್ಯಾಲಿಯಲ್ಲಿರುವ ಆರೈಕೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಇಲ್ಲಿ ಕೊರೋನವೈರಸ್ ತಗಲಿತ್ತು.
ಅವರನ್ನು ಆಗ ಲಾ ಲಿನಿಯದಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚೇತರಿಸಿಕೊಂಡಿದ್ದು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅವರೀಗ ಸ್ಪೇನ್‌ನಲ್ಲಿ ಕೊರೋನವೈರಸ್‌ನಿಂದ ಚೇತರಿಸಿಕೊಂಡಿರುವ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ.
ನೆದರ್‌ಲ್ಯಾಂಡ್ಸ್‌ನ 107 ವರ್ಷದ ಮಹಿಳೆ ಕಾರ್ನೆಲಿಯಾ ರಾಸ್ ಈ ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡಿರುವ ಜಗತ್ತಿನ ಅತಿ ಹಿರಿಯ ಮಹಿಳೆಯಾಗಿದ್ದಾರೆ. ಈ ಕಾಯಿಲೆಯು ಸಾಮಾನ್ಯವಾಗಿ ಹಿರಿಯರಿಗೆ ಮಾರಕವಾಗಿರುತ್ತದೆ.