ಅಝಾನ್ ನೀಡುವಂತಿಲ್ಲ ಎಂದು ಆದೇಶಿಸಿಲ್ಲ: ದಿಲ್ಲಿ ಪೊಲೀಸ್ ಸ್ಪಷ್ಟನೆ

Update: 2020-04-25 15:43 GMT

ಹೊಸದಿಲ್ಲಿ, ಎ.25: ದಿಲ್ಲಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸ್ಥಳೀಯ ಮುಸ್ಲಿಮರೊಂದಿಗೆ "ಇನ್ನು ಅಝಾನ್ ನೀಡುವಂತಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ( ಎಲ್ಜಿ) ಅವರು ಆದೇಶಿಸಿದ್ದಾರೆ" ಎಂದು ಹೇಳಿರುವ ವೈರಲ್ ವಿಡಿಯೋದ ಹಿಂದಿನ ಸತ್ಯ ಕೊನೆಗೂ ಹೊರಬಿದ್ದಿದೆ. ಆ ವಿಡಿಯೋದಲ್ಲಿ ಅಝಾನ್ ನೀಡಬಾರದು ಎಂದು ಎಲ್ಜಿ ಅವರು ನೀಡಿರುವ ಆದೇಶದ ಪ್ರತಿ ತೋರಿಸುವಂತೆ ಸ್ಥಳೀಯ ಮಹಿಳೆಯರು ಕೇಳಿದಾಗ ಪೊಲೀಸ್ ಸಿಬ್ಬಂದಿ "ನಮ್ಮ ಜೊತೆ ಚರ್ಚೆಗಿಳಿಯಬೇಡಿ, ಬೇಕಾದರೆ ರೋಹಿಣಿ ನಗರ ಪೊಲೀಸ್ ಠಾಣೆಗೆ ಬಂದು ಆದೇಶವನ್ನು ನೋಡಿ" ಎಂದು ಹೇಳುತ್ತಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು " ಅಝಾನ್ ನೀಡಲು ಯಾವುದೇ ನಿರ್ಬಂಧ ಇಲ್ಲ. ಲಾಕ್ ಡೌನ್ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಜನರು ಯಾವುದೇ ಆರಾಧನಾಲಯಗಳಲ್ಲಿ ಪ್ರಾರ್ಥನೆಗಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ " ಎಂದು ಹೇಳಿದ್ದಾರೆ.

ಈ ಬಗ್ಗೆ ದಿಲ್ಲಿ ಪೊಲೀಸರೂ ಟ್ವೀಟ್ ಮಾಡಿ " ಎಲ್ಲರೂ ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು, ಮನೆಯಲ್ಲೇ ನಮಾಝ್ ಮಾಡಬೇಕು. ಆದರೆ ಅಝಾನ್ ಅನ್ನು ಎನ್ ಜಿ ಟಿ ಮಾರ್ಗಸೂಚಿ ಪ್ರಕಾರ ನೀಡಬಹುದು " ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬಿಬಿಸಿ ಹಿಂದಿ ಜೊತೆ ಮಾತನಾಡಿರುವ ರೋಹಿಣಿ ವಿಭಾಗದ ಡಿಸಿಪಿ ಎಸ್ ಡಿ ಮಿಶ್ರಾ ಅವರು "ನಾನು ಇವತ್ತು ಬೆಳಗ್ಗೆ ವಿಡಿಯೋ ನೋಡಿದ್ದೇನೆ. ನಿಜವಾಗಿ ಆ ಪೇದೆಗೆ ಅಝಾನ್ ಮತ್ತು ನಮಾಝ್ ನಡುವಿನ ವ್ಯತ್ಯಾಸ ಗೊತ್ತಾಗಿಲ್ಲ. ಹಾಗಾಗಿ ತಪ್ಪು ಮಾಹಿತಿ ನೀಡಿದ್ದಾನೆ. ಲಾಕ್ ಡೌನ್ ಅವಧಿಯಲ್ಲಿ ಸಾಮೂಹಿಕ ನಮಾಝ್ ಅನ್ನು ನಿರ್ಬಂಧಿಸಲಾಗಿದೆ. ಆದರೆ ಅಝಾನ್ ಗೆ ಯಾವುದೇ ನಿರ್ಬಂಧ ಇಲ್ಲ. ಎಲ್ಜಿ ಕಚೇರಿಯಿಂದ ಅಂತಹ ಯಾವುದೇ ಆದೇಶ ಹೊರಡಿಸಿಲ್ಲ. ನಾವು ಈ ವಿಷಯವನ್ನು ಎಲ್ಲ ಮಸೀದಿಗಳ ಮೌಲ್ವಿಗಳಿಗೆ ಹೇಳಿದ್ದೇವೆ.  ಸುಳ್ಳು ಮಾಹಿತಿ ಹರಡಿದ್ದಕ್ಕೆ ಪೊಲೀಸ್ ಪೇದೆ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ." ಎಂದು ಹೇಳಿದ್ದಾರೆ.

ದಿಲ್ಲಿಯಲ್ಲಿ ಅಝಾನ್ ( ನಮಾಜ್ ಗೆ ಬರುವಂತೆ ನೀಡುವ ಕರೆ) ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳುವ ಈ ವಿಡಿಯೋ ವ್ಯಾಪಕ ಸಂಶಯ ಹಾಗು ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ಈ ಸ್ಪಷ್ಟೀಕರಣಗಳೊಂದಿಗೆ ಸಂಶಯ ನಿವಾರಣೆಯಾಗಿದೆ. 

ಮಸೀದಿಗಳಲ್ಲಿ ದಿನದ ಐದು ಹೊತ್ತು ನಮಾಝ್ ಸಮಯ ಆಗಿದ್ದನ್ನು ತಿಳಿಸಲು ಆಝಾನ್ ಕರೆ ನೀಡಲಾಗುತ್ತದೆ. ಇದಕ್ಕೆ ಎಲ್ಲಿಯೂ ಸರಕಾರ ನಿರ್ಬಂಧ ವಿಧಿಸಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಮಸೀದಿ ಸಿಬ್ಬಂದಿ ಅಝಾನ್ ನೀಡಿ ಬಳಿಕ ಮಸೀದಿಯ ಧರ್ಮಗುರುಗಳು ಮತ್ತು ಸಿಬ್ಬಂದಿ ಮಾತ್ರ ಮಸೀದಿಯಲ್ಲಿ ನಮಾಜ್ ನಿರ್ವಹಿಸಬಹುದು. ಸಾರ್ವಜನಿಕರು ಮಸೀದಿಗೆ ನಮಾಝ್ ಗೆ ಬರುವಂತಿಲ್ಲ ಎಂಬುದು ಈಗ ದೇಶಾದ್ಯಂತ ಚಾಲ್ತಿಯಲ್ಲಿರುವ ಆದೇಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News