×
Ad

ಲಾಕ್‌ಡೌನ್: ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ

Update: 2020-04-27 09:48 IST

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ನಿತ್ಯ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹೊರ ರಾಜ್ಯದ ಬೀದಿ ಬದಿ ವ್ಯಾಪಾರಿಗಳ ನಿತ್ಯ ಕರ್ಮಕ್ಕೂ ಇಂದು ಸಂಕಷ್ಟ ಎದುರಾಗಿದೆ.

ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಪದೇಶ ಮತ್ತಿತರ ಪ್ರದೇಶಗಳಿಂದ ಆಗಮಿಸಿ ಹಲವಾರು ವರ್ಷಗಳಿಂದ ತರಕಾರಿ, ಹಣ್ಣು, ಹೂವನ್ನು ಕೆ.ಆರ್.ಮಾರುಕಟ್ಟೆ ಸುತ್ತಲಿನ ಜಾಗದಲ್ಲಿ ಮಾರಾಟ ಮಾಡಿ, ರಾತ್ರಿ ಅಲ್ಲೇ ಮಾರುಕಟ್ಟೆಯ ಅಂಗಡಿ ಮುಂಗಟ್ಟು ಖಾಲಿ ಜಾಗದಲ್ಲೇ ರಾತ್ರಿ ಕಳೆದು, ಬೆಳಗಾದರೆ ಅಲ್ಲೇ ಸಾರ್ವಜನಿಕ ಶೌಚಗೃಹದಲ್ಲಿ ನಿತ್ಯ ಕರ್ಮಗಳನ್ನು ಮುಗಿಸುತ್ತಿದ್ದ ನೂರಾರು ಜನ ವ್ಯಾಪಾರಸ್ಥರ ಜೀವನ ಇಂದು ಅತಂತ್ರಗೊಂಡಿದೆ.

ವ್ಯಾಪಾರಸ್ಥರಿಗೆ ಆರ್ಥಿಕ ಪೆಟ್ಟು: ಸದಾ ಜನ ಜಾತ್ರೆಯಂತೆ ಇರುತ್ತಿದ್ದ ಕೆ.ಆರ್.ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿದೆ. ಇನ್ನು ಬಿಬಿಎಂಪಿಯ ಎಂಟು ವಲಯಗಳಲ್ಲಿನ ಬೀದಿ ಬದಿ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ದುಡಿಯುವ ದಾರಿ ಕಾಣದೆ ಆಸರೆಯನ್ನೇ ಕಳೆದುಕೊಂಡಂತಾಗಿದೆ. ಸಾಲ ಮಾಡಿ ಜೀವನ ನಡೆಸುವಂತಹ ಪರಿಸ್ಥಿತಿ ಒದಗಿದೆ. ಇದರಿಂದ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಸಾವಿರಾರು ಮಾರಾಟಗಾರರು ಕಂಗಾಲಾಗಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ ಹಾಗೂ ವಿವಿಧ ಜಿಲ್ಲೆಗಳಲ್ಲಿರುವ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಭಾರಿ ಪೆಟ್ಟು ಬಿದ್ದಿದೆ.

ಚದುರಿದ ವ್ಯಾಪಾರ: ಕೆ.ಆರ್.ಮಾರುಕಟ್ಟೆ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದ ಹಣ್ಣು, ತರಕಾರಿ, ಹೂವು ವ್ಯಾಪಾರಸ್ಥರು ಇಂದು ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ಜಾಗಗಳನ್ನು ಹುಡುಕಿಕೊಂಡು ವ್ಯಾಪಾರಕ್ಕೆ ಮುಂದಾಗಿದ್ದಾರೆ. ಕೆಲ ಪಾನಿಪುರಿ ಮಾರಾಟಗಾರರು ತರಕಾರಿ ಮಾರಾಟಕ್ಕೆ ಮುಂದಾಗಿದ್ದಾರೆ. ಕೆ.ಆರ್.ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರು ಇಂದು ಚಾಮರಾಜಪೇಟೆಯ ರಸ್ತೆ ಬದಿಗಳಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ವಿಜಯನಗರ ಸುತ್ತಮುತ್ತಲಲ್ಲಿ, ನ್ಯೂ ತರಗುಪೇಟೆ ಗಲ್ಲಿಗಳಲ್ಲಿ ಹೀಗೆ ಅಲ್ಲಲ್ಲಿ ಚದುರಿಹೋಗಿದ್ದಾರೆ. 

ಸಾಲಗಾರರ ಕಾಟ: ಇನ್ನು ಬನಶಂಕರಿ, ಸಾರಕ್ಕಿ ಸೇರಿ ಬಹುತೇಕ ಬಡಾವಣೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು, ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದವರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೇ. 10 ರಿಂದ 20 ರಷ್ಟು ಬಡ್ಡಿಗೆ ಹಣ ತಂದು ವ್ಯಾಪಾರ ಮಾಡುತ್ತಿದ್ದವರು ಇಂದು ಸಾಲಗಾರರ ಕಾಟಕ್ಕೆ ತತ್ತರಿಸಿಹೋಗಿದ್ದಾರೆ.

‘50 ರೂ. ದುಡಿಯುವುದು ಕಷ್ಟ’

ಮಕ್ಕಳಿಗೆ ಮದುವೆ ಮಾಡಿ ಸಾಲ ಮಾಡಿದ್ದೇನೆ. ಇದನ್ನು ತೀರಿಸಲು ಹಲವು ವರ್ಷಗಳಿಂದ ಕೆ.ಆರ್.ಮಾರುಕಟ್ಟೆಯಲ್ಲಿ ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಮಾರುಕಟ್ಟೆಯಲ್ಲೇ ಮಲಗಿ ನಿತ್ಯ ಕರ್ಮಗಳನ್ನು ಕಳೆಯುತ್ತಿದೆ. ಇದೀಗ ದಿನಕ್ಕೆ 50 ರೂ. ದುಡಿಯುವುದು ಕಷ್ಟವಾಗಿದೆ. ಇನ್ನು ಊರಿಗೆ ವಾಪಸ್ ಹೋಗೋಣ ಎಂದರೂ ಬಸ್ ವ್ಯವಸ್ಥೆ ಇಲ್ಲ. ಫುಟ್‌ಪಾತ್‌ನಲ್ಲೇ ನಮ್ಮ ಜೀವನ ಕಳೆಯುವಂತಾಗಿದೆ. ನಿತ್ಯ ಶೌಚಗೃಹ, ಸ್ನಾನಕ್ಕೂ ಸಂಕಷ್ಟ ಎದುರಾಗಿದೆ ಎಂದು ತರಕಾರಿ ವ್ಯಾಪಾರಸ್ಥೆ ರತ್ನಮ್ಮ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.

ಬಾಗಲಕೋಟೆ ಜಮಖಂಡಿ ತಾಲೂಕು ನಮ್ಮದು. ಹಲವು ವರ್ಷಗಳಿಂದ ಕೆ.ಆರ್.ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ತರಕಾರಿ ಮಾಡುಕೊಂಡು ಜೀವನ ನಡೆಸುತ್ತಿದೆ. ಈಗ ಅಲ್ಲೂ ಕೂಡ ವ್ಯಾಪಾರಕ್ಕೆ ಅವಕಾಶವಿಲ್ಲದಂತಾಗಿದೆ.

-ಶಾರದಮ್ಮ, ತರಕಾರಿ ವ್ಯಾಪಾರಸ್ಥೆ.

ನಗರದಲ್ಲಿ 80 ರಿಂದ 1 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಕೇವಲ ತರಕಾರಿ, ಹೂವು, ಹಣ್ಣು ಮಾರಾಟಕ್ಕೆ ಬಿಬಿಎಂಪಿ ಅವಕಾಶ ಕಲ್ಪಿಸಿದೆ. ಪಾನಿಪುರಿ, ಫುಟ್‌ಪಾತ್‌ನಲ್ಲಿ ಆಹಾರ ತಯಾರಿಸುವವರು ಸೇರಿ ಇನ್ನುಳಿದ ವ್ಯಾಪಾರಸ್ಥರ ಆರ್ಥಿಕ ನೆರವಿಗೂ ಸರಕಾರ ಮುಂದಾಗಬೇಕು.

 -ರಂಗಸ್ವಾಮಿ, ರಾಜ್ಯಾಧ್ಯಕ್ಷ,

ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News