‘ಪೆಟ್ರೋಲ್ ಪಂಪ್ ನಲ್ಲಿ ನೋಟು ಬೀಳಿಸಿ ಕೊರೋನ ಹರಡಲು ಯತ್ನ’ ಎನ್ನುವ ವೈರಲ್ ವಿಡಿಯೋ ಸುಳ್ಳು

Update: 2020-04-27 11:25 GMT

ಹೊಸದಿಲ್ಲಿ: ಪೆಟ್ರೋಲ್ ಪಂಪ್ ಒಂದಕ್ಕೆ ಸ್ಕೂಟರ್ ‍ನಲ್ಲಿ ಆಗಮಿಸಿದ ಮುಸ್ಲಿಂ ವ್ಯಕ್ತಿಯೊಬ್ಬರ ಬಲಗೈಯಿಂದ ನೋಟೊಂದು ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ. ಆ ವ್ಯಕ್ತಿ ಕೊರೋನವೈರಸ್ ಸೋಂಕು ಹರಡುವ ಉದ್ದೇಶದಿಂದಲೇ ನೆಲಕ್ಕೆ ನೋಟುಗಳನ್ನು ಬೀಳಿಸಿದ್ದಾರೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ.

ಈ ಕುರಿತಂತೆ ಎಬಿಪಿ ನ್ಯೂಸ್ ಆಂಕರ್ ವಿಕಾಸ್ ಭಡೌರಿಯ ಟ್ವೀಟ್  ಮಾಡಿದ್ದಾರೆ. ಟಿವಿ9 ಗುಜರಾತಿ ವೀಡಿಯೋದ ಕ್ಲಿಪ್ಪಿಂಗ್ ಅನ್ನೂ ಪ್ರಸಾರ ಮಾಡಿದೆಯಲ್ಲದೆ ಗುಜರಾತ್‍ನ ನವ್ಸರಿ ಎಂಬಲ್ಲಿನ ವ್ಯಕ್ತಿ ಭೀತಿ ಹುಟ್ಟಿಸಲೆಂದೇ 20 ರೂ. ನೋಟು ಎಸೆದಿದ್ದಾನೆಂದು ಹೇಳಿಕೊಂಡಿತು.

ಈ ಕುರಿತಂತೆ altnews.in ನವ್ಸರಿ ಪೊಲೀಸರನ್ನು ಸಂಪರ್ಕಿಸಿದಾಗ ಅಲ್ಲಿನ ಇನ್‍ಸ್ಪೆಕ್ಟರ್ ಪಿ ಪಿ ಬ್ರಹ್ಮ್‍ಭಟ್ಟ್ ಮಾಹಿತಿ ನೀಡಿ, “ಸೀಸಿಟಿವಿ ನೋಡಿ ಪೆಟ್ರೋಲ್ ಪಂಪ್ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಡಿಯೋದಲ್ಲಿರುವ ವಲ್ಸದ್ ನಿವಾಸಿ ಮುಹಮ್ಮದ್ ಯೂಸುಫ್ ಇಲ್ಯಾಸ್ ಶೇಖ್ ಎಂಬವರನ್ನು ಠಾಣೆಗೆ ಬರ ಹೇಳಿ ಪ್ರಶ್ನಿಸಿದಾಗ ಆತ ಅಪಘಾತವೊಂದಕ್ಕೆ ತುತ್ತಾದ ನಂತರ ಬಲಗೈ ಊನವಾಗಿದ್ದು ಸರಿಯಾಗಿ ಕಾರ್ಯಾಚರಿಸುತ್ತಿಲ್ಲವಾದುದರಿಂದ ನೋಟುಗಳು ಕೆಳಕ್ಕೆ ಬಿದ್ದಿದ್ದವು ಎನ್ನುವುದು ಸ್ಪಷ್ಟಗೊಂಡಿದೆ. ಆದರೆ ಲಾಕ್ ಡೌನ್ ವೇಳೆ ವಲ್ಸದ್‍ ನಿಂದ ನವ್ಸರಿಗೆ ಪ್ರಯಾಣಿಸಿದ್ದಕ್ಕೆ ಆತನ ವಿರುದ್ಧ ದೂರು ದಾಖಲಿಸಲಾಗಿದೆ'' ಎಂದು ತಿಳಿಸಿದ್ದಾರೆ.

ಆ ವ್ಯಕ್ತಿಗೆ ಕೊರೋನ ಸೋಂಕು ಇದೆಯೇ ಎಂದು ಕೇಳಿದಾಗ ಪೊಲೀಸ್ ಅಧಿಕಾರಿ ಮಾಹಿತಿ ನೀಡಿ “ಆತನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಕೊರೋನ ಸೋಂಕು ಇಲ್ಲವೆಂದು ತಿಳಿದು ಬಂದಿದ್ದು ಆತನಿಗೆ ಗೃಹ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ'' ಎಂದರು.

altnews.in ಸಿಸಿಟಿವಿಯಲ್ಲಿ ಕಂಡು ಬಂದ ವ್ಯಕ್ತಿಯನ್ನೇ ಸಂಪರ್ಕಿಸಿದಾಗ ಎಪ್ರಿಲ್ 22ರ ಘಟನಾವಳಿಯನ್ನು ವಿವರಿಸಿ ದಾಭೇಲ್‍ಗೆ ಪ್ರಯಾಣಿಸುವಾಗ ದಾರಿ ಮಧ್ಯೆ ಪೆಟ್ರೋಲ್ ತುಂಬಿಸಲು ನಿಲ್ಲಿಸಿದ್ದಾಗಿ, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದುದರಿಂದ ಕನ್ನಡಕ ಹಾಗೂ ಮಾಸ್ಕ್ ಧರಿಸಿದ್ದಾಗಿ ತಿಳಿಸಿದರು. “ನಾನು 2009ರಲ್ಲಿ ಅಪಘಾತಕ್ಕೀಡಾಗಿದ್ದೆ. ನಂತರ ಬಲಗೈಯ್ಯಲ್ಲಿ ಯಾವುದೇ ವಸ್ತುವನ್ನು ಸರಿಯಾಗಿ ಹಿಡಿದುಕೊಳ್ಳಲು ಆಗುತ್ತಿಲ್ಲ. ನೋಟು ಕೆಳ ಬಿದ್ದಿದ್ದೂ ನನಗೆ ತಿಳಿದಿರಲಿಲ್ಲ. ವೀಡಿಯೋ ಗಮನಿಸಿದರೆ, ನನ್ನ ಎಡಗೈಯನ್ನು ಜೇಬಿಗೆ ಹಾಕಿದ್ದೆ. ಆ ನಂತರ ನೋಟುಗಳು ನನ್ನ ಬಲಗೈ ಬೆರಳಿನ ಎಡೆಗಳಲ್ಲಿ ಸಿಲುಕಿ ಕೆಳಕ್ಕೆ ಬಿದ್ದಿದ್ದು ನನಗೆ ತಿಳಿಯಲಿಲ್ಲ'' ಎಂದಿದ್ದಾರೆ.

ಈ ಘಟನೆಯ ವೀಡಿಯೋ ಶೇರ್ ಮಾಡಿದವರು ಕೇವಲ 20 ಸೆಕೆಂಡ್ ಅವಧಿಯ ವೀಡಿಯೋ ಶೇರ್ ಮಾಡಿದ್ದಾರೆ. ಆದರೆ ಈ 2:13 ಸೆಕೆಂಡ್ ಅವಧಿಯ ವೀಡಿಯೋದ 46ನೇ ಸೆಕೆಂಡ್ ಸಂದರ್ಭದ ದೃಶ್ಯ ವೀಕ್ಷಿಸಿದರೆ ಇಲ್ಯಾಸ್ ತನ್ನ ಎಡಗೈಯ್ಯನ್ನು ಜೇಬಿಗೆ ಹಾಕಿ ನೋಟು ತೆಗೆದು ಎರಡೂ ಕೈಗಳಿಂದ ಅದನ್ನು ಹಿಡಿದುಕೊಂಡು ನಂತರ ಎಡಗೈಯ್ಯಿಂದ ಅದನ್ನು ನೀಡುವುದು ಕಾಣಿಸುತ್ತದೆ.

“ಪೊಲೀಸರಿಗೆ ನನ್ನ ಬಲಗೈ ಊನವಾಗಿರುವ ಕುರಿತು ಹೇಳಿದೆ ಹಾಗೂ ನಾನು  ತಿಳಿಯದೇ ನೋಟು ಕೆಳಕ್ಕೆ ಬೀಳಿಸಿದೆ ಎಂದು ಹೇಳಿದೆ. ಪೆಟ್ರೋಲ್ ಪಂಪ್‍ನವರೂ ಠಾಣೆಗೆ ಬಂದು ನನ್ನ ಕೈ ನೋಡಿ ತಾವು ಹೇಳಿದ್ದು ತಪ್ಪೆಂದು ತಿಳಿಸಿದರು. ನನಗೆ ಜಾಮೀನು ನೀಡಿದ್ದಾರೆ ಈಗ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಇದ್ದೇನೆ'' ಎಂದರು.

altnews.in ಗೆ ಇಲ್ಯಾಸ್ ವೀಡಿಯೋವೊಂದನ್ನೂ ನೀಡಿದ್ದು ಅದರಲ್ಲಿ ಅವರ ಬಲಗೈ ಊನವಾಗಿರುವುದು ಕಾಣಿಸುತ್ತದೆ. ಅವರ  ಬಲಗೈಗಾದ ಹಾನಿ ಬಗ್ಗೆ ತಿಳಿಯಲು ಎಕ್ಸ್-ರೇ ಕೂಡ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News