ಲಾಕ್​ಡೌನ್ ನಿಂದ ಕಂಗಾಲಾದ ಭಿಕ್ಷುಕರು: ಊಟ, ನೀರಿಗೂ ಪರದಾಟ !

Update: 2020-04-27 18:25 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆ ಹೊರರಾಜ್ಯ, ಹೊರಜಿಲ್ಲೆಯ ವಲಸಿಗರಿಗೆ ಹಾಗೂ ನಿರಾಶ್ರಿತರಿಗೆ ಬೆಂಗಳೂರು ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಆಶ್ರಯ ನೀಡಿ ಊಟ ಬಟ್ಟೆಯ ವ್ಯವಸ್ಥೆ ಕಲ್ಪಿಸಿದೆ. ಆದರೆ, ನಗರದ ಹಲವೆಡೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ಭಿಕ್ಷುಕರ ಬಗ್ಗೆ ಯಾವುದೇ ಕಾಳಜಿ ವಹಿಸದಿರುವುದು ಬೇಸರದ ಸಂಗತಿಯಾಗಿದೆ.

ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಿಕ್ಷುಕರು ಇದ್ದಾರೆ. ಈ ಎಲ್ಲ ಭಿಕ್ಷುಕರಿಗೆ ರಾಜ್ಯ ಸರಕಾರವು ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿದೆ ಎಂದು ಹೇಳುತ್ತಿದೆ. ಆದರೆ, ವಾಸ್ತವವಾಗಿ ನಗರದ ಕೆಲವು ಭಿಕ್ಷುಕರಿಗೆ ಮಾತ್ರ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಬಹುತೇಕ ಭಿಕ್ಷುಕರು ಎಲ್ಲೆಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರೂ ಅದೇ ರಸ್ತೆ ಬದಿಯಲ್ಲಿ ಇಂದು ಭಿಕ್ಷೆ, ಊಟ ಹಾಗೂ ನೀರು ಕೂಡ ಇಲ್ಲದೇ ಅರೆಜೀವವಾಗಿದ್ದಾರೆ.

ಲಾಕ್​ಡೌನ್ ಆಗುವ ಮೊದಲು ನಗರದ ಭಿಕ್ಷುಕರು ತಮ್ಮದೇ ಆದಂತಹ ನೆಮ್ಮದಿ ಜೀವನ ನಡೆಸುತ್ತಿದ್ದರು. ಆಗ ಅವರಿಗೆ ಭಿಕ್ಷೆ ಹಾಕುವವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ದೇವಸ್ಥಾನ, ಮಸೀದಿ, ಚರ್ಚ್ ಗಳಂತಹ ಪ್ರಾರ್ಥನಾ ಮಂದಿರಗಳು, ಬಸ್ ಹಾಗೂ ರೈಲ್ವೆ ನಿಲ್ದಾಣ, ಮೆಟ್ರೋ ಸ್ಟೇಷನ್, ಆಸ್ಪತ್ರೆ, ಕಲ್ಯಾಣ ಮಂಟಪ, ಸಮಾರಂಭಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷುಕರು ಭಿಕ್ಷೆ ಬೇಡಿ, ಬರುವ ಹಣದಿಂದ ಒಂದೊತ್ತು ಅಥವಾ ಎರಡೊತ್ತು ಊಟ ಮಾಡಿ ಜೀವಿಸುತ್ತಿದ್ದವರು ಇಂದು ಕೊರೋನ ಲಾಕ್​ಡೌನ್ ನಿಂದ ಊಟ, ನೀರು ಇಲ್ಲದೆ ಕಂಗಾಲಾಗಿದ್ದಾರೆ.

ನಮ್ಮನ್ನು ಕಂಡೊಡನೆ ಕೆಲವರು ಊಟ ನೀರು ಕೊಡುತ್ತಾರೆ, ಇನ್ನು ಕೆಲವರು, ಆಹಾರ ಸಾಮಗ್ರಿ ಕೊಡುತ್ತಾರೆ. ಆಹಾರ ಸಾಮಗ್ರಿಯಿಂದ ನಮಗೇನು ಉಪಯೋಗವಿಲ್ಲ. ಅಡುಗೆ ಮಾಡಿಕೊಂಡು ತಿನ್ನಲು ನಮ್ಮ ಬಳಿ ಯಾವುದೇ ವ್ಯವಸ್ಥೆಯಿಲ್ಲ. ಊಟ ಕೊಟ್ಟರೆ ಮಾತ್ರ ಪಡೆಯುತ್ತೇನೆ. ಕೆಲವರು ಚಿಲ್ಲರೇ ಹಣ ನೀಡಿದರೆ ಪಡೆಯುತ್ತೇನೆ. ಕೆಲ ಪೊಲೀಸರು ಮಾಸ್ಕ್ ಹಾಕಿ ಎಂದು ಬೈಯುತ್ತಾರೆ. ನಮ್ಮ ಬಳಿ ಹಾಕಲೂ ಬಟ್ಟೆಯೇ ಇಲ್ಲ. ಈಗಿರುವಾಗ ಮಾಸ್ಕ್ ಹೇಗೆ ಕೊಂಡು ಹಾಕಿಕೊಳ್ಳಲು ಸಾಧ್ಯ. ಇನ್ನೂ ಯಾವಾಗ ಎಲ್ಲರೂ ಹೊರಗೆ ಬಂದು ಓಡಾಡುವುದು? ಎಲ್ಲರೂ ಬೇಗ ಓಡಾಡುವಂತಾಗಲಿ ಎಂದು ಮೆಜೆಸ್ಟಿಕ್ ಬಳಿ ಭಿಕ್ಷೆ ಬೇಡುವ ಪಕೀರಪ್ಪ ಹೇಳುತ್ತಾರೆ.

ಯಾರಾದರೂ ಕೊಟ್ಟರೆ ಮಾತ್ರ ಊಟ: ಭಿಕ್ಷುಕರ ಸ್ಥಿತಿ ಹೇಗಾಗಿದೆ ಎಂದರೆ, ಯಾರಾದರು ಏನಾದರೂ ತಿನ್ನಲು ಕೊಟ್ಟರೆ ಮಾತ್ರ ಅಂದಿನ ಊಟ. ಇಲ್ಲದಿದ್ದರೆ ಊಪವಾಸವೇ ಎನ್ನುವ ಸ್ಥಿತಿ ಎದುರಾಗಿದೆ. ಕೆಲವು ಸಂಘ ಸಂಸ್ಥೆಗಳು, ಪೊಲೀಸರು ಅಲ್ಲಲ್ಲಿ ಕಾಣುವ ಭಿಕ್ಷುಕರಿಗೆ ತಿನ್ನಲು ಏನಾದರೂ ಕೊಡುತ್ತಾರೆ. ಆದರೆ, ಯಾರೂ ಸಹ ಪ್ರತಿನಿತ್ಯವಾಗಲಿ, ಸಮಯಕ್ಕೆ ಸರಿಯಾಗಿ ಆಗಲಿ ನೀಡುವುದಿಲ್ಲ. ಆದ್ದರಿಂದ ಯಾರಾದರೂ ಕೊಟ್ಟರೆ ಮಾತ್ರ ಊಟ ಎಂಬಂತಾಗಿದೆ.

ಬೆಂಗಳೂರಿನಲ್ಲಿರುವ ನಿರಾಶ್ರಿತ ಕೇಂದ್ರವೂ ಭಿಕ್ಷುಕರ ಬಗ್ಗೆ ಗಮನವಹಿಸಿ, ಇವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇನ್ನೂ ಈ ಲಾಕ್​ಡೌನ್ ಎಷ್ಟು ದಿನ ಮುಂದುವರೆಯುತ್ತದೆ ಎಂಬುದು ಗೊತ್ತಿಲ್ಲ. ಆದ್ದರಿಂದ ನಗರದಲ್ಲಿರುವ ಎಲ್ಲ ಭಿಕ್ಷುಕರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕಾಗಿದೆ. 

ಸರಕಾರಕ್ಕೆ ಮಾನವ ಹಕ್ಕು ಹೋರಾಟಗಾರರ ಪತ್ರ
ಲಾಕ್​ಡೌನ್ ನಿಂದ ಭಿಕ್ಷುಕರು ಕಂಗಾಲಾಗಿದ್ದಾರೆ. ಇನ್ನೂ ಎಷ್ಟು ದಿನ ಈ ಲಾಕ್​ಡೌನ್ ಇರುತ್ತದೆ ಎಂಬುದು ಗೊತ್ತಿಲ್ಲ. ಬೆಂಗಳೂರಿನಲ್ಲಿ ಅತೀ ಹೆಚ್ಚು ಭಿಕ್ಷುಕರು ಇದ್ದಾರೆ. ಅಲ್ಲದೇ ರಾಜ್ಯಾದ್ಯಂತ ಇರುವ ಭಿಕ್ಷುಕರಿಗೆ ರಾಜ್ಯ ಸರಕಾರ ಪ್ರತ್ಯೇಕವಾಗಿ ನೆರವಾಗಬೇಕು ಎಂದು ಮಾನವ ಹಕ್ಕು ಹೋರಾಟಗಾರರು ಪತ್ರದ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News