ಫ್ಯಾಕ್ಟ್ ಚೆಕ್: ಪಾಲ್ಘರ್ ನಂತರ ಪಂಜಾಬ್ ಸಾಧುವಿನ ಮೇಲಿನ ದಾಳಿಗೆ ಕೋಮುದ್ವೇಷದ ಬಣ್ಣ ಹಚ್ಚುವ ಯತ್ನ

Update: 2020-04-28 11:38 GMT

ಹೊಸದಿಲ್ಲಿ: ಪಂಜಾಬ್ ರಾಜ್ಯದ ಹೋಶಿಯಾರ್‍ಪುರ್ ಎಂಬಲ್ಲಿ ಗಾಯಗೊಂಡಿರುವ ಸಾಧುವೊಬ್ಬರು ಚಿಕಿತ್ಸೆ ಪಡೆಯುತ್ತಿರುವ  ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ಮೇಲೆ ‘ಶಾಂತಿಯುತರು’ ಆಶ್ರಮದಲ್ಲಿ ಬರ್ಬರ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗುತ್ತಿದೆ. ಈ ಮೂಲಕ ಪಾಲ್ಘರ್ ನಂತರ ಮತ್ತೊಂದು ಘಟನೆಗೂ ಕೋಮುಬಣ್ಣ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ.

ಸಾಧುವಿನ ವೀಡಿಯೋ ಜತೆಗಿನ ಪೋಸ್ಟ್‍ ನಲ್ಲಿ ಹೀಗೆಂದು ಬರೆಯಲಾಗಿದೆ. “ಪಾಲ್ಘರ್ ಘಟನೆಯ ನಂತರ ಇನ್ನೊಬ್ಬ ಸಾಧು ಮೇಲೆ ಪಂಜಾಬ್‍ನ ಹೋಶಿಯಾರ್‍ಪುರ್ ಎಂಬಲ್ಲಿ ಶಾಂತಿಯುತರಿಂದ ದಾಳಿ ನಡೆದಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಈ ಸಾಧುಗಳ ಮೇಲೆ ಏಕೆ ದಾಳಿ ನಡೆಯುತ್ತಿದೆ?''. ಫೇಸ್ ಬುಕ್‍ನಲ್ಲಿ ಈ ವೀಡಿಯೋ ಹಾಗೂ ಪೋಸ್ಟ್ ವ್ಯಾಪಕವಾಗಿ ಶೇರ್ ಆಗಿದೆ.

ಯಾವುದು ನಿಜ ?

ಪೊಲೀಸರು ಹಾಗೂ ಸ್ವತಃ ಆ ಸಾಧು ಕೂಡ ಈ ಘಟನೆಗೆ ಮತೀಯ ಅಥವಾ ರಾಜಕೀಯ ಬಣ್ಣವಿಲ್ಲ ಎಂದಿದ್ದಾರೆ. ಇದೊಂದು ಕಳ್ಳತನದ ಪ್ರಕರಣ. ತಾನು ಪ್ರತಿರೋಧ ತೋರಿದ್ದರಿಂದ ದಾಳಿ ನಡೆಸಲಾಯಿತು ಎಂದು ಸ್ವತಃ ಸಾಧುವೇ ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತಂತೆ ಸಾಧು ನೀಡಿದ ಮಾಹಿತಿ ಹೋಶಿಯಾರ್‍ಪುರ್ ಪೊಲೀಸರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ‍ನಲ್ಲಿದೆ. “ಕೆಲ ಡ್ರಗ್ಸ್ ವ್ಯಸನಿಗಳು ಎರಡು ದಿನಗಳ ಹಿಂದೆ ನನ್ನ ಮೇಲೆ ದಾಳಿ ನಡೆಸಿ ಹಣದ ಬೇಡಿಕೆಯಿರಿಸಿದ್ದರು. ನಾನು ಪ್ರತಿರೋಧ ತೋರಿದ್ದರಿಂದ  ಹಲ್ಲೆ ನಡೆಯಿತು. ಅವರ ಮುಖದ ಮೇಲಿದ್ದ ಬಟ್ಟೆ ಸರಿಸಲು ಯತ್ನಿಸಿ ಅವರಿಗೆ ಗುದ್ದಿದೆ. ಅದಕ್ಕಾಗಿ ಅವರು ಚೂರಿಯಿಂದ ದಾಳಿ ನಡೆಸಿದರು. ಇದು ರಾಜಕೀಯ ಪ್ರೇರಿತ ಘಟನೆ ಎಂದು ನನಗನಿಸುವುದಿಲ್ಲ. ಇಬ್ಬರು ಹುಡುಗರಿದ್ದರು ಹಣ ಕದ್ದು ಇಬ್ಬರೂ ಓಡಿ ಹೋದರು. ಪೊಲೀಸರು ಈ ಪ್ರಕರಣದಲ್ಲಿ ನನಗೆ ಬಹಳ ಸಹಕರಿಸಿದರು'' ಎಂದು ಸ್ವಾಮಿ ಪುಷ್ಪೇಂದ್ರ ಹೇಳಿರುವುದು ಟ್ವೀಟ್ ನಲ್ಲಿದೆ.

ಈ ಪ್ರಕರಣ ಕುರಿತಂತೆ  ನಾಲ್ಕು ಮಂದಿಯನ್ನು  ಬಂಧಿಸಲಾಗಿದೆ. ಘಟನೆಯಲ್ಲಿ ಯಾವುದೇ ಕೋಮು ಬಣ್ಣ ಅಥವಾ ರಾಜಕೀಯ ಉದ್ದೇಶವಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News