ಸೌದಿ ಅರೇಬಿಯಾದಲ್ಲಿನ ಭಾರತೀಯರಿಗೆ ಉದ್ಯೋಗ ನಷ್ಟ ಸಾಧ್ಯತೆ: ಭಾರತೀಯ ರಾಯಭಾರಿ
ಹೊಸದಿಲ್ಲಿ, ಎ.28: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ವಿಶ್ವಾದ್ಯಂತದ ಆರ್ಥಿಕತೆಗಳು ಪ್ರತಿಕೂಲ ಪರಿಣಾಮವನ್ನು ಎದುರಿಸಲಿವೆ ಮತ್ತು ಸೌದಿ ಅರೇಬಿಯಾ ಇದಕ್ಕೆ ಹೊರತಾಗಿಲ್ಲ ಎಂದು ಆ ರಾಷ್ಟ್ರದಲ್ಲಿ ಭಾರತೀಯ ರಾಯಭಾರಿಯಾಗಿರುವ ಔಸಾಫ್ ಸಯೀದ್ ಅವರು ಹೇಳಿದ್ದಾರೆ.
ಸ್ವೈಪ್ ಮೂಲಕ ಸುದ್ದಿ ಜಾಲತಾಣ Theprint.inಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಯೀದ್ ಅವರು, ಕೆಲವು ಭಾರತೀಯರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಬಹುದು ಮತ್ತು ಇದು ಸೌದಿ ಅರೇಬಿಯಾದಿಂದ ಭಾರತಕ್ಕೆ ವಾರ್ಷಿಕ ರವಾನೆ ಹಣದ ಮೊತ್ತವನ್ನು ತಗ್ಗಿಸಲಿದೆ ಎಂದರು.
ಸೌದಿ ಅರೇಬಿಯಾದಲ್ಲಿ 26 ಲಕ್ಷ ಭಾರತೀಯರು ದುಡಿಯುತ್ತಿದ್ದು, ಇದು ಯಾವುದೇ ದೇಶದಲ್ಲಿ ಅತ್ಯಂತ ದೊಡ್ಡ ವಿದೇಶಿ ಸಮುದಾಯವಾಗಿದೆ. ಈ ವಲಸಿಗರು ಪ್ರತಿ ವರ್ಷ ಭಾರತಕ್ಕೆ ಭಾರೀ ಪ್ರಮಾಣದಲ್ಲಿ ಹಣವನ್ನು ರವಾನಿಸುತ್ತಾರೆ.
ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ತನ್ನ ವಲಸಿಗರಿಂದ ಹಣವನ್ನು ಸ್ವೀಕರಿಸುತ್ತಿರುವ ರಾಷ್ಟ್ರವಾಗಿದೆ. ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ಕಳೆದ ವರ್ಷ 83 ಶತಕೋಟಿ ಡಾ.ಹಣವನ್ನು ಸ್ವದೇಶಕ್ಕೆ ರವಾನಿಸಿದ್ದು,ಇದರಲ್ಲಿ ದೊಡ್ಡ ಪಾಲು ಯುಎಇ ಮತ್ತು ಸೌದಿ ಅರೇಬಿಯಾದಲ್ಲಿನ ಭಾರತೀಯ ವಲಸಿಗರದಾಗಿತ್ತು.
ಈ ವರ್ಷ ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಈ ಮೊತ್ತವು ಶೇ.23ರಷ್ಟು ಕುಸಿಯಲಿದೆ ಎಂದು ವಿಶ್ವ ಬ್ಯಾಂಕ್ ನಿರೀಕ್ಷಿಸಿದೆ.
‘ಹಣ ರವಾನೆಯಲ್ಲಿ ಇಳಿಕೆಯಾಗುವ ಬಗ್ಗೆ ನಾವು ಯಾವುದೇ ವಿವರವಾದ ವಿಶ್ಲೇಷಣೆಯನ್ನು ನಡೆಸಿಲ್ಲ,ಆ ಬಗ್ಗೆ ಮಾತನಾಡಲು ಕಾಲವಿನ್ನೂ ಪಕ್ವವಾಗಿಲ್ಲ’ ಎಂದು ಸಯೀದ್ ತಿಳಿಸಿದರು.
ದೀರ್ಘಕಾಲದಿಂದ ಸೌದಿಯಲ್ಲಿ ವಾಸವಿದ್ದು,ಅಲ್ಲಿ ದುಡಿಯುತ್ತಿದ್ದ 17 ಭಾರತೀಯರು ಕೊರೋನ ವೈರಸ್‌ನಿಂದ ಮೃತಪಟ್ಟಿದ್ದಾರೆ. ಸೌದಿಯಲ್ಲಿ ಈವರೆಗೆ 17,500ಕ್ಕೂ ಅಧಿಕ ಜನರು ಸೋಂಕಿತರಾಗಿ ದ್ದಾರೆ. ಸೌದಿ ಸರಕಾರವು ರಾಷ್ಟ್ರೀಯತೆವಾರು ಮಾಹಿತಿಗಳನ್ನು ನೀಡುವುದಿಲ್ಲ, ಹೀಗಾಗಿ ಸೋಂಕಿಗೆ ತುತ್ತಾಗಿರುವ ಭಾರತೀಯರ ಸಂಖ್ಯೆಯನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯ ಸಮುದಾಯದ ಸಂಪರ್ಕದಲ್ಲಿದೆ ಮತ್ತು ಕಾರ್ಮಿಕ ಶಿಬಿರಗಳಲ್ಲಿ ವಾಸವಾಗಿರುವ ಭಾರತೀಯ ಉದ್ಯೋಗಿಗಳ ಸ್ಥಿತಿಯನ್ನು ತಿಳಿದುಕೊಳ್ಳಲು ಸೌದಿಯ ಕೆಲವು ಬೃಹತ್ ಉದ್ಯೋಗದಾತ ಕಂಪನಿಗಳೊಂದಿಗೆ ಸಂವಹನ ನಡೆಸುತ್ತಿದೆ. ಕೆಲವು ಕಾರ್ಮಿಕ ಶಿಬಿರಗಳು ಆಹಾರದ ಕೊರತೆಯ ಬಗ್ಗೆ ದೂರಿಕೊಂಡಿದ್ದು, ಆಹಾರವನ್ನು ಪೂರೈಸುವ ಮೂಲಕ ನೆರವಾಗುತ್ತಿದ್ದೇವೆ. ಕೆಲವು ಪ್ರಕರಣಗಳಲ್ಲಿ ಔಷಧಿಗಳನ್ನೂ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.