ಸ್ವದೇಶಿ ಕೋವಿಡ್-19 ಪರೀಕ್ಷಾ ಕಿಟ್‌ಗಳು ಮುಂದಿನ ತಿಂಗಳು ಲಭ್ಯ: ಹರ್ಷವರ್ಧನ್
ಹೊಸದಿಲ್ಲಿ, ಎ.28: ದೇಶದಲ್ಲಿ ಮೇ ತಿಂಗಳ ವೇಳೆಗೆ ಸ್ವದೇಶಿ ಕೊರೋನ ವೈರಸ್ ಪರೀಕ್ಷಾ ಕಿಟ್‌ಗಳು ಉತ್ಪಾದನೆಯಾಗಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಮಂಗಳವಾರ ಇಲ್ಲಿ ತಿಳಿಸಿದರು.
“ಮೇ ತಿಂಗಳ ವೇಳೆಗೆ ದೇಶದಲ್ಲಿಯೇ ಆರ್‌ಟಿ-ಪಿಸಿಆರ್ ಮತ್ತು ಆ್ಯಂಟಿಬಾಡಿ ಪರೀಕ್ಷಾ ಕಿಟ್‌ಗಳನ್ನು ತಯಾರಿಸಲು ನಮಗೆ ಸಾಧ್ಯವಾಗಲಿದೆ. ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮತಿ ದೊರಕಿದ ಬಳಿಕ ಉತ್ಪಾದನೆ ಆರಂಭವಾಗಲಿದೆ. ಮೇ 31ರ ವೇಳೆಗೆ ದಿನವೊಂದಕ್ಕೆ ಒಂದು ಲಕ್ಷ ಪರೀಕ್ಷೆಗಳನ್ನು ನಡೆಸುವ ನಮ್ಮ ಗುರಿಯನ್ನು ಸಾಧಿಸಲು ಇದು ನೆರವಾಗಲಿದೆ” ಎಂದರು.
ಇದಕ್ಕೂ ಮುನ್ನ ಹರ್ಷವರ್ಧನ ಅವರು ದಿಲ್ಲಿಯ ಉಪ ರಾಜ್ಯಪಾಲ, ದಿಲ್ಲಿ ಆರೋಗ್ಯ ಸಚಿವ, ದಿಲ್ಲಿ ಮಹಾನಗರ ಪಾಲಿಕೆಗಳ ಆಯುಕ್ತರು,ದಿಲ್ಲಿಯ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು,ಡಿಸಿಪಿಗಳು ಮತ್ತಿತರರೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪುನರ್‌ಪರಿಶೀಲನಾ ಸಭೆಯೊಂದನ್ನು ನಡೆಸಿದರು.
ಕೊರೋನ ವೈರಸ್ ಪರೋಕ್ಷ ವರದಾನ
ಕೊರೋನ ವೈರಸ್ ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿವಿಧ ಚಟುವಟಿಕೆಗಳಿಗೆ ಪ್ರೇರಣೆ ನೀಡಿರುವದರಿಂದ ಈ ಪಿಡುಗು ದೇಶದ ಪಾಲಿಗೆ ಪರೋಕ್ಷ ವರದಾನವಾಗಿದೆ ಎಂದು ಹರ್ಷವರ್ಧನ್ ಹೇಳಿದರು.
ಜೈವಿಕ ತಂತ್ರಜ್ಞಾನ ಇಲಾಖೆ ಅಧೀನದ ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳೊಂದಿಗೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, “ಕೊರೋನ ವೈರಸ್ ಪಿಡುಗು ಭಾರತಕ್ಕೆ ಕಾಲಿರಿಸಿದ ಬಳಿಕ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಹಲವಾರು ಚಟುವಟಿಕೆಗಳು ಸಹ ಆರಂಭಗೊಂಡಿವೆ. ಹೀಗಾಗಿ ಈ ಪಿಡುಗು ನಮ್ಮ ಪಾಲಿಗೆ ಪರೋಕ್ಷ ವರದಾನವಾಗಿದೆ. ನಾವೀಗ ವೈಯಕ್ತಿಕ ರಕ್ಷಣಾ ಉಪಕರಣ (ಪಿಪಿಇ)ಗಳನ್ನು ತಯಾರಿಸುತ್ತಿದ್ದೇವೆ ಮತ್ತು ದೇಶದಲ್ಲಿಂದು ನೂರಕ್ಕೂ ಅಧಿಕ ತಯಾರಕರಿದ್ದಾರೆ. ಪ್ರತಿದಿನ 1-1.5 ಲಕ್ಷ ಪಿಪಿಇಗಳು ತಯಾರಿಕೆಯಾಗುತ್ತಿವೆ” ಎಂದರು.