ಉದ್ಯೋಗಿಗಳ ವೇತನ ಕಡಿತ: ಕೇರಳ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಕೊಚ್ಚಿ, ಎ.28: ರಾಜ್ಯದಲ್ಲಿ ಕೊರೋನ ವೈರಸ್ ಪಿಡುಗಿನ ವಿರುದ್ಧ ಹೋರಾಟಕ್ಕೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಮುಂದಿನ ಐದು ತಿಂಗಳ ಅವಧಿಗೆ ಪ್ರತಿ ತಿಂಗಳು ಸರಕಾರಿ ನೌಕರರ ಆರು ದಿನಗಳ ವೇತನವನ್ನು ಕಡಿತಗೊಳಿಸುವ ಕೇರಳ ಸರಕಾರದ ಆದೇಶಕ್ಕೆ ಕೇರಳ ಉಚ್ಚ ನ್ಯಾಯಾಲಯವು ಮಂಗಳವಾರ ಎರಡು ತಿಂಗಳ ತಡೆಯಾಜ್ಞೆ ನೀಡಿದೆ.
ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಉದ್ಯೋಗಿಗಳ ಒಂದು ವರ್ಗ ಮತ್ತು ಅವರ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಅಂಗೀಕರಿಸಿದ ನ್ಯಾ.ಬಿ.ಕೆ.ಥಾಮಸ್ ಅವರು ಮಧ್ಯಂತರ ಆದೇಶವನ್ನು ಹೊರಡಿಸಿದರು.
ವೇತನ ಕಡಿತವು ಎಲ್ಲ ಸರಕಾರಿ ಸ್ವಾಮ್ಯದ ಸಂಸ್ಥೆಗಳು,ಸಾರ್ವಜನಿಕ ಕ್ಷೇತ್ರದ ಉದ್ಯಮಗಳು,ಅರೆ-ಸರಕಾರಿ ಸಂಸ್ಥೆಗಳು,ವಿವಿಗಳು ಇತ್ಯಾದಿಗಳ ಉದ್ಯೋಗಿಗಳಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದ ಕೇರಳ ಸರಕಾರವು,ಮಾಸಿಕ 20,000 ರೂ.ಗಿಂತ ಕಡಿಮೆ ವೇತನ ಪಡೆಯುತ್ತಿರುವ ನೌಕರರಿಗೆ ಕಡಿತದಿಂದ ವಿನಾಯಿತಿ ನೀಡಿತ್ತು.
ಸಚಿವರು,ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು,ವಿವಿಧ ಆಯೋಗಗಳ ಸದಸ್ಯರು ಒಂದು ವರ್ಷ ಕಾಲ ಶೇ.30ರಷ್ಟು ಕಡಿಮೆ ವೇತನಗಳನ್ನು ಪಡೆಯಲಿದ್ದಾರೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.