ನೀವು ಹಸಿದಿರುವಾಗ ಯಾವುದೇ ಆಹಾರವೂ ರುಚಿಯಾಗಿರುತ್ತದೆ, ಏಕೆ ಗೊತ್ತೇ?

Update: 2020-04-29 18:02 GMT
ಸಾಂದರ್ಭಿಕ ಚಿತ್ರ

ನೀವು ತುಂಬ ಹಸಿದಿರುವಾಗ ಏನನ್ನೇ ತಿಂದರೂ ಅದು ನಿಮಗೆ ರುಚಿಯಾಗಿಯೇ ಇರುತ್ತದೆ. ಇಂತಹ ಸ್ಥಿತಿಯಲ್ಲಿ ನಿಮಗೆ ಸೇರದ ಆಹಾರವನ್ನೂ ಪಟ್ಟಾಗಿ ಕಬಳಿಸುತ್ತೀರಿ. ಹೀಗೇಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ಕಾರಣವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಂತೆ ನಿಮಗೆ ಏನನ್ನಾದರೂ ತಿನ್ನಬೇಕು ಎಂಬ ತುಡಿತವಿದ್ದಾಗ ಅಥವಾ ನಿಮಗೆ ತೀರ ಹಸಿವಾದಾಗ ಯಾವುದೇ ಆಹಾರವೂ ನಿಮ್ಮ ಬಾಯಿಗೆ ತುಂಬ ರುಚಿಯಾಗಿರುತ್ತದೆ.

ಇಂತಹ ಸಂದರ್ಭದಲ್ಲಿ ನಿಮ್ಮ ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳಲ್ಲಿ ಬದಲಾವಣೆಯಾಗುತ್ತದೆ ಮತ್ತು ಇಂತಹುದೇ ಆಹಾರವನ್ನು ನೀವು ಆಯ್ಕೆ ಮಾಡುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ನೀವು ತಿನ್ನುವ ಯಾವುದೇ ಆಹಾರವನ್ನು ನೀವು ಇಷ್ಟಪಡುತ್ತೀರಿ. ವ್ಯಕ್ತಿಯೋರ್ವ ಹಸಿದಾಗ ಆತನ ನಾಲಿಗೆಯು ಕಹಿಗಿಂತ ಸಿಹಿರುಚಿಯನ್ನು ಹೆಚ್ಚಾಗಿ ಗುರುತಿಸುತ್ತದೆ. ಇದೇ ಕಾರಣದಿಂದ ಊಟದ ಸ್ವಾದವನ್ನು ನೀವು ಅನುಭವಿಸುವುದಿಲ್ಲ. ಆ ಸಮಯದಲ್ಲಿ ನೀವು ಅದರ ಬಗ್ಗೆ ತಲೆ ಕೆಡಿಸಿಕೊಂಡಿರುವುದಿಲ್ಲ.

ಜಪಾನಿನ ಒಕಾಝಾಕಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಫಿಜಿಯಾಲಾಜಿಕಲ್ ಸೈನ್ಸ್‌ಸ್‌ನ ಸಂಶೋಧಕರ ತಂಡವು ಇಲಿಗಳ ಮೇಲೆ ಈ ಅಧ್ಯಯನವನ್ನು ನಡೆಸಿದೆ. ಅಧ್ಯಯನದ ವೇಳೆ ಇಲಿಗಳನ್ನು ಹಸಿದಿರುವಂತೆ ಮಾಡಿದ್ದ ಸಂಶೋಧಕರು,ಇಲಿಯು ಹಸಿದಾಗ ಮಿದುಳು ರುಚಿಮೊಗ್ಗುಗಳಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತದೆ ಎನ್ನುವುದನ್ನು ಕಂಡುಕೊಂಡಿದ್ದರು. ಲಭ್ಯ ಅಂಶಗಳ ವಿಶ್ಲೇಷಣೆ ನಡೆಸಿದಾಗ ‘ಹೈಪೊಥಲಮಸ್’ ಎಂಬ ಮಿದುಳಿನ ಸಣ್ಣ ಭಾಗವೊಂದು ಹಸಿವು ಮತ್ತು ಭಾವನಾತ್ಮಕ ಪ್ರತಿವರ್ತನೆಗಳು ಸೇರಿದಂತೆ ಕೆಲವು ಕಾರ್ಯಗಳನ್ನು ನಿಯಂತ್ರಿಸುತ್ತದೆ ಎನ್ನುವುದು ಅವರಿಗೆ ತಿಳಿದುಬಂದಿತ್ತು. ಇದರಲ್ಲಿನ ನ್ಯುರಾನ್ ಅಥವಾ ನರಕೋಶಗಳು ಇಲಿಯ ರುಚಿಮೊಗ್ಗುಗಳನ್ನು ನಿಯಂತ್ರಿಸುತ್ತವೆ.

ಮಿದುಳಿನ ಭಾಗವಾಗಿರುವ ಹೈಪೊಥಲಮಸ್‌ನಲ್ಲಿರುವ ನರಕೋಶಗಳು ಹಸಿವೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿವೆ ಎಂದು ವರದಿಯಲ್ಲಿ ತಿಳಿಸಿರುವ ಮುಖ್ಯ ಲೇಖಕ ಜೀನ್ ಫು,‘ನರಕೋಶಗಳು ಖಾಲಿಹೊಟ್ಟೆಯಲ್ಲಿ ಅಥವಾ ಉಪವಾಸದ ಸ್ಥಿತಿಗಳಲ್ಲಿ ರುಚಿಗ್ರಹಣದ ಮೇಲೆ ಪರಿಣಾಮವನ್ನು ಬೀರುತ್ತವೆಯೇ ಎನ್ನುವುದನ್ನು ಕಂಡುಕೊಳ್ಳಲು ನಾವು ಇಲಿಯಲ್ಲಿಯ ಆಯ್ದ ನರಕೋಶಗಳನ್ನು ಕ್ರಿಯಾಶೀಲಗೊಳಿಸಿದ್ದೆವು’ ಎಂದಿದ್ದಾರೆ.

 ದೈಹಿಕವಾಗಿ ಆದ್ಯತೆಗಳ ಬದಲಾವಣೆಯು ವ್ಯಕ್ತಿಗೆ ತನ್ನ ಹಸಿವನ್ನು ನಿಯಂತ್ರಿಸಲು ಅವಕಾಶ ನೀಡುತ್ತದೆ. ಇದು ವಿಷೇಷವಾಗಿ ತಮ್ಮ ಆಹಾರದ ಅಭ್ಯಾಸವನ್ನು ನಿಯಂತ್ರಿಸಲು ಬಯಸುವ ಬೊಜ್ಜುದೇಹಿಗಳಿಗೆ ಲಾಭದಾಯಕವಾಗಿದೆ. ಸಾಮಾನ್ಯವಾಗಿ ನಮ್ಮ ಶರೀರವು ಸಿಹಿ ರುಚಿಯನ್ನು ಇಷ್ಟ ಪಡುತ್ತದೆ. ಏಕೆಂದರೆ ಸಿಹಿಯು ಕ್ಯಾಲರಿಗಳನ್ನು ಒಳಗೊಂಡಿರುತ್ತದೆ ಮತ್ತು ಇದು ಶಕ್ತಿಯಾಗಿ ಪರಿವರ್ತಿಲ್ಪಡುತ್ತದೆ,ಹೀಗಾಗಿ ಶರೀರಕ್ಕೆ ಧನಾತ್ಮಕವಾಗಿದೆ. ಇನ್ನೊಂದೆಡೆ ಕಹಿಯಾದ ಅಥವಾ ರುಚಿಯಲ್ಲದ ಆಹಾರವನ್ನು ಶರೀರವು ಇಷ್ಟಪಡುವುದಿಲ್ಲ,ಏಕೆಂದರೆ ಸರಿಯಲ್ಲದ ಏನನ್ನಾದರೂ ಶರೀರವು ನಕಾರಾತ್ಮಕವಾಗಿ ಪರಿಗಣಿಸುತ್ತದೆ ಎಂದೂ ಅಧ್ಯಯನ ವರದಿಯು ತಿಳಿಸಿದೆ.

ಇಲಿಗಳಂತೆ ಮನುಷ್ಯರಲ್ಲಿಯೂ ಹಸಿವೆಯಾದಾಗ ನರಕೋಶಗಳು ಕ್ರಿಯಾಶೀಲಗೊಳ್ಳುತ್ತವೆ ಮತ್ತು ಇದರಿಂದಾಗಿ ರುಚಿಯಿಲ್ಲದ ಆಹಾರವನ್ನೂ ಸೇವಿಸುವುದು ಸುಲಭವಾಗುತ್ತದೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News