ರೋಹಿತ್ ವಿಶ್ವದ ಶ್ರೇಷ್ಠ ಏಕದಿನ ಕ್ರಿಕೆಟಿಗ: ಗಂಭೀರ್ ಶ್ಲಾಘನೆ

Update: 2020-04-30 17:48 GMT

ಹೊಸದಿಲ್ಲಿ, ಎ.30: ರೋಹಿತ್ ಶರ್ಮಾ ಸಿಡಿದೆದ್ದು ನಿಂತರೆ ಬೌಲರ್‌ಗಳಿಗೆ ಅವರನ್ನು ಕಟ್ಟಿಹಾಕುವುದು ಕಷ್ಟ. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಹಾಗೂ ಯಾವುದೇ ಬೌಲಿಂಗ್ ದಾಳಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಶ್ಲಾಘನೀಯ. ಬಲಗೈ ಬ್ಯಾಟ್ಸ್‌ಮನ್ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ದ್ವಿಶತಕ(3)ಗಳಿಸಿರುವ ಸಾಧನೆ ಮಾಡಿದ್ದಾರೆ. ರೋಹಿತ್ ಇಂದು 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ರೋಹಿತ್‌ರನ್ನು ವಿಶ್ವದ ಓರ್ವ ಶ್ರೇಷ್ಠ ಏಕದಿನ ಕ್ರಿಕೆಟಿಗ ಎಂದು ಶ್ಲಾಘಿಸಿದ್ದಾರೆ.

147 ಏಕದಿನ, 58 ಟೆಸ್ಟ್ ಹಾಗೂ 37 ಟ್ವೆಂಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಗಂಭೀರ್, ಟ್ವಿಟರ್ ಮುಖಾಂತರ ರೋಹಿತ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರುವುದರೊಂದಿಗೆ ರೋಹಿತ್ ವಿಶ್ವದ ಶ್ರೇಷ್ಠ ಬಿಳಿ ಚೆಂಡಿನ ಕ್ರಿಕೆಟಿಗನಾಗಿದ್ದು, ಅವರು ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ.

ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರೋಹಿತ್ 50 ಓವರ್ ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಸಾಧನೆ ಮಾಡಿದ್ದಾರೆ. ಈಡನ್‌ಗಾರ್ಡನ್ಸ್‌ನಲ್ಲಿ2014ರಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 173 ಎಸೆತಗಳಲ್ಲಿ 264 ರನ್ ಗಳಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಅವರ ಈ ಅಮೋಘ ಇನಿಂಗ್ಸ್‌ನಲ್ಲಿ 9 ಸಿಕ್ಸರ್ ಹಾಗೂ 33 ಬೌಂಡರಿಗಳಿದ್ದವು.

2019ರ ವಿಶ್ವಕಪ್‌ನಲ್ಲಿ ರೋಹಿತ್ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಕೇವಲ 9 ಪಂದ್ಯಗಳಲ್ಲಿ ಆಡಿದ್ದ ಅವರು 81ರ ಸರಾಸರಿಯಲ್ಲಿ 648 ರನ್ ಗಳಿಸಿದ್ದರು. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಗರಿಷ್ಠ ಶತಕ(5)ಸಿಡಿಸಿದ ಸಾಧನೆ ಮಾಡಿದ್ದರು. ಕುಮಾರ ಸಂಗಕ್ಕರ(4)ದಾಖಲೆಯನ್ನು ಮುರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News