ಕೊರೋನ ವೈರಸ್ ಚೀನಾ ಲ್ಯಾಬ್‌ನಲ್ಲೇ ಸೃಷ್ಟಿ: ಟ್ರಂಪ್ ಪ್ರತಿಪಾದನೆ

Update: 2020-05-01 04:00 GMT

ವಾಷಿಂಗ್ಟನ್ : ಇಡೀ ವಿಶ್ವವನ್ನು ಕಂಗೆಡಿಸಿರುವ ಕೊರೋನ ವೈರಸ್ ಚೀನಾದ ವೈರಾಲಜಿ ಲ್ಯಾಬ್‌ನಲ್ಲಿ ಸೃಷ್ಟಿಯಾಗಿರುವುದು ಖಚಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಆದರೆ ಅದಕ್ಕೆ ಪುರಾವೆ ನೀಡಲು ನಿರಾಕರಿಸಿದರು. ಟ್ರಂಪ್ ಅವರ ಈ ಹೇಳಿಕೆಯಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡುವ ನಿರೀಕ್ಷೆಯಿದೆ.

ವೂಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಈ ವೈರಸ್ ಸೃಷ್ಟಿ ಮಾಡಲಾಗಿದೆ ಎನ್ನುವುದಕ್ಕೆ ಪುರಾವೆ ನೋಡಿದ್ದೀರಾ ಎಂದು ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶ್ನಿಸಿದಾಗ, ಹೌದು; ನನ್ನಲ್ಲಿದೆ ಎಂದಷ್ಟೇ ಉತ್ತರಿಸಿ, ವಿವರಗಳನ್ನು ನೀಡಲು ನಿರಾಕರಿಸಿದರು. ನಿಮಗೆ ಅದನ್ನು ಹೇಳಲಾರೆ; ಅದನ್ನು ಹೇಳಲು ನನಗೆ ಅವಕಾಶ ನೀಡಿಲ್ಲ ಎಂದರು.

ಚೀನಾದ ಸರ್ಕಾರಿ ಸ್ವಾಮ್ಯದ ವೂಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಟ್ರಂಪ್ ಆರೋಪವನ್ನು ನಿರಾಕರಿಸಿದೆ. ಅಮೆರಿಕದ ಇತರ ಅಧಿಕಾರಿಗಳು ಕೂಡಾ ಈ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಬಹುತೇಕ ತಜ್ಞರ ನಂಬಿಕೆಯಂತೆ, ಕಾಡುಪ್ರಾಣಿಗಳನ್ನು ಮಾರಾಟ ಮಾಡುವ ವೂಹಾನ್ ಮಾರುಕಟ್ಟೆಯಲ್ಲಿ ಈ ವೈರಸ್ ಹುಟ್ಟಿಕೊಂಡಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ.

ಸಾಂಕ್ರಾಮಿಕದಲ್ಲಿ ಸಾವಿರಾರು ಅಮೆರಿಕನ್ನರು ಮೃತಪಟ್ಟ ಬೆನ್ನಲ್ಲೇ ರಿಪಬ್ಲಿಕನ್ ಪಕ್ಷದ ಮುಖಂಡರಾಗಿರುವ ಟ್ರಂಪ್‌ಗೆ ಚೀನಾ ಜತೆಗಿನ ಅಸಹನೆ ಹೆಚ್ಚುತ್ತಿದೆ. ಅಮೆರಿಕದ ಅರ್ಥ ವ್ಯವಸ್ಥೆ ಇದರಿಂದ ಅಲ್ಲೋಲ ಕಲ್ಲೋಲವಾಗಿದ್ದು, ನವೆಂಬರ್ ತಿಂಗಳಲ್ಲಿ ಮರು ಆಯ್ಕೆಯ ಕನಸು ಕಾಣುತ್ತಿರುವ ಟ್ರಂಪ್ ಆಸೆಗೆ ಬಲವಾದ ಏಟು ಬಿದ್ದಂತಾಗಿದೆ.

ಈ ಮಾರಕ ವೈರಸ್ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿತ್ತೇ ಎನ್ನುವುದನ್ನು ತಿಳಿದುಕೊಳ್ಳಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಈ ಮೊದಲು ಟ್ರಂಪ್ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News