ಗುಜರಾತ್: ಬಡವರಿಗೆ ದಿನಸಿ ಹಂಚಲು ಕೋಟಿ ರೂ. ಖರ್ಚು ಮಾಡಿದ ನಸ್ರುಲ್ಲಾ ಖಾನ್
ಗುಜರಾತ್, ಮೇ 2: ಇಲ್ಲಿನ ವಲ್ಸದ್ ಜಿಲ್ಲೆಯ ಯುವ ಉದ್ಯಮಿ ನಸ್ರುಲ್ಲಾ ಖಾನ್ (40) ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯ 35 ಗ್ರಾಮಗಳ ಅಗತ್ಯವಿರುವ ಬಡ ಕುಟುಂಬಗಳಿಗೆ 1.10 ಕೋಟಿ ರೂಪಾಯಿ ವೆಚ್ಚದ ದಿನಸಿಗಳನ್ನು ವಿತರಿಸಿದ್ದಾರೆ.
ವಾಪಿಯಲ್ಲಿ ಎಲೆಕ್ಟ್ರಿಕ್ ಪ್ಯಾನೆಲ್ ಉತ್ಪಾದನಾ ಘಟಕವನ್ನು ಹೊಂದಿರುವ ಖಾನ್ ಇದುವರೆಗೆ 21 ಸಾವಿರ ದಿನಸಿ ಕಿಟ್‌ಗಳನ್ನು ವಿತರಿಸಿದ್ದಾರೆ. ವಾಪಿಯ ದುಂಗ್ರಿ ಫಲಿಯಾ ಪ್ರದೇಶದ ನಿವಾಸಿಯಾಗಿರುವ ಇವರು ಮಾರ್ಚ್ 27ರಿಂದ ನಿರಂತರವಾಗಿ ದಿನಸಿ ಹಂಚುತ್ತಿದ್ದಾರೆ. ಇದಕ್ಕಾಗಿ 35 ಗ್ರಾಮಗಳ ಸರಪಂಚರು ಸೇರಿದಂತೆ 70 ಮಂದಿಯ ತಂಡ ರಚಿಸಿದ್ದಾರೆ. ವಲ್ಸದ್, ವಾಪಿ, ನವಸಾರಿ ಮತ್ತಿತರ ಕಡೆಗಳಲ್ಲಿ ಸಗಟು ವ್ಯಾಪಾರಿಗಳಿಂದ ದಿನಸಿ ಖರೀದಿಸುತ್ತಿದ್ದು, ಬಳಿಕ ತಂಡ ಇದನ್ನು ಕಿಟ್‌ಗಳಾಗಿ ವಿತರಿಸುತ್ತದೆ.
ಪ್ರತಿದಿನ ಬೆಳಗ್ಗೆ 9ಕ್ಕೆ ಖಾನ್ ಅವರ ಗೋದಾಮಿನಿಂದ ದಿನಸಿ ಕಿಟ್ ಹೊತ್ತ ಮೂರು ಲಾರಿಗಳು ಗ್ರಾಮಗಳಿಗೆ ಹೊರಡುತ್ತವೆ. ಸ್ಥಳೀಯ ಆಡಳಿತ ಇವುಗಳಿಗೆ ಅಗತ್ಯ ವಸ್ತುಗಳ ಸೇವಾ ಪಾಸ್ ನೀಡಿದೆ. ಪ್ರತಿ ಕಿಟ್‌ನಲ್ಲಿ 10 ಕೆಜಿ ಅಕ್ಕಿ, 5 ಕೆಜಿ ಗೋಧಿ ಹಿಟ್ಟು, 2 ಕೆಜಿ ತೊಗರಿ ಬೇಳೆ, 3 ಕೆಜಿ ಆಲೂಗಡ್ಡೆ, 3 ಕೆಜಿ ಈರುಳ್ಳಿ, 1 ಕೆಜಿ ಎಣ್ಣೆ ಮತ್ತು 1 ಕೆಜಿ ಉಪ್ಪು ಇರುತ್ತದೆ.
ಸರಪಂಚರು ಮತ್ತು ನಮ್ಮ ತಂಡದವರು ಸೇರಿ ಅಗತ್ಯವಿರುವವ ಪಟ್ಟಿ ಮಾಡಿದ್ದಾರೆ. ಇದುವರೆಗೆ 35 ಗ್ರಾಮಗಳಲ್ಲಿ 21 ಸಾವಿರ ಕಿಟ್ ವಿತರಿಸಿದ್ದೇವೆ. ಖಾಲಿ ಹೊಟ್ಟೆಯಲ್ಲಿ ಮಲಗುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು. ನಮ್ಮನ್ನು ಬೆಳೆಸಲು ತಂದೆ ಸಾಕಷ್ಟು ಕಷ್ಟಪಟ್ಟಿದ್ದರು. ದೇವರ ದಯೆಯಿಂದ ನಮಗೆ ಈಗ ಸಾಕಷ್ಟು ಇದೆ. ಆದ್ದರಿಂದ ಲಾಕ್‌ಡೌನ್ ಅವಧಿಯಲ್ಲಿ ಬಡವರಿಗೆ ಏಕೆ ವಿತರಿಸಬಾರದು ಎಂಬ ಯೋಚನೆ ಬಂತು ಎಂದು ನಸ್ರುಲ್ಲಾ ಖಾನ್ ವಿವರಿಸುತ್ತಾರೆ.