×
Ad

‘ಪಿಎಂ-ಕೇರ್ಸ್’ ಕುರಿತು ಆರ್ ಟಿಐ ಅರ್ಜಿಗೆ ಮಾಹಿತಿ ನೀಡಲು ನಿರಾಕರಿಸಿದ ಪ್ರಧಾನಿ ಕಾರ್ಯಾಲಯ

Update: 2020-05-02 13:39 IST

ಹೊಸದಿಲ್ಲಿ: ಕೋವಿಡ್-19 ವಿರುದ್ಧ ಹೋರಾಡಲು ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಪಿಎಂ-ಕೇರ್ಸ್ ಫಂಡ್‍ ಗೆ ದೇಣಿಗೆ ನೀಡಿದವರ ವಿವರಗಳು,  ಇಲ್ಲಿಯ ತನಕ ಸಂಗ್ರಹಿಸಲಾದ ಮೊತ್ತ ಹಾಗೂ ಲಾಕ್ ಡೌನ್ ಹೇರಿರುವ ಹಿಂದಿನ ವೈಜ್ಞಾನಿಕ ಕಾರಣದ ಕುರಿತಂತೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯಿದೆಯನ್ವಯ ಸಲ್ಲಿಸಲಾದ ಅರ್ಜಿಯ ಕುರಿತಂತೆ ಮಾಹಿತಿಯನ್ನು ನೀಡಲು ಪ್ರಧಾನಿ ಕಾರ್ಯಾಲಯ ನಿರಾಕರಿಸಿದೆ. ಅರ್ಜಿದಾರ ‘ವಿವೇಚನಾರಹಿತ ಹಾಗೂ ಅಪ್ರಾಯೋಗಿಕ' ಬೇಡಿಕೆಯಿಟ್ಟಿದ್ದಾರೆಂಬ ಕಾರಣ ನೀಡಿದೆ ಎಂದು thewire.in ವರದಿ ಮಾಡಿದೆ.

ಪರಿಸರ ಹೋರಾಟಗಾರ ಹಾಗೂ ಸೋಶಿಯಲ್ ಆ್ಯಕ್ಷನ್ ಫಾರ್ ಫಾರೆಸ್ಟ್ ಆ್ಯಂಡ್ ಎನ್ವಿರಾನ್ಮೆಂಟ್ ಸ್ಥಾಪಕ ವಿಕ್ರಾಂತ್ ತೊಂಗಡ್ ಎಂಬವರು ಎಪ್ರಿಲ್  24ರಂದು ಈ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಹಿತದೃಷ್ಟಿಯ ನೆಲೆಯಲ್ಲಿ ತಾವು ಈ ಮಾಹಿತಿ ಕೇಳುತ್ತಿರುವುದಾಗಿ, ಲಾಕ್ ಡೌನ್ ಸಂಬಂಧ ಉನ್ನತ ಮಟ್ಟದ ಸಭೆಗಳ ವಿವರ,  ಕೇಂದ್ರ ಸರಕಾರ ಕೋವಿಡ್-19 ಪರಿಸ್ಥಿತಿ ನಿಭಾಯಿಸಲು ಕೈಗೊಡಿರುವ ತಂತ್ರಗಾರಿಕೆ, ಸರಕಾರ  ಆರ್ಡರ್ ಮಾಡಿದ ಟೆಸ್ಟ್ ಕಿಟ್‍ಗಳು ಹಾಗೂ ರಾಜ್ಯವಾರು ವಿತರಣಾ ಮಾಹಿತಿಯನ್ನು ಕೇಳಿದ್ದರು.

ಇದಕ್ಕೆ ಉತ್ತರಿಸಿದ ಪ್ರಧಾನಿ ಕಾರ್ಯಾಲಯವು, ಸುಪ್ರೀಂ ಕೋರ್ಟಿನ 2011ರ ಆದೇಶವೊಂದನ್ನು ಉಲ್ಲೇಖಿಸಿ ವಿವೇಚನಾರಹಿತ ಹಾಗೂ ಅಪ್ರಾಯೋಗಿಕ  ಬೇಡಿಕೆಗಳನ್ನು ಆರ್‍ಟಿಐ ಕಾಯಿದೆಯನ್ವಯ ಸಲ್ಲಿಸಿ ಎಲ್ಲಾ ರೀತಿಯ ಮಾಹಿತಿ ಕೇಳುವುದು ಆಡಳಿತದ  ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದು  ಎಂದು ಹೇಳಿದೆ.

ಅರ್ಜಿಯು ವಿವಿಧ ವಿಚಾರಗಳ ಕುರಿತಂತೆ ಹಲವಾರು ಮನವಿಗಳನ್ನು ಹೊಂದಿದೆ ಎಂದೂ ಕೇಂದ್ರ ಮಾಹಿತಿ ಆಯೋಗದ 2009 ಆದೇಶವೊಂದನ್ನು ಪ್ರಧಾನಿ ಕಾರ್ಯಾಲಯ ಉಲ್ಲೇಖಿಸಿ  ಈ ಕುರಿತಂತೆ  ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News